ಸಾರಾಂಶ

ಸಮಾಜದ ಕಾರ್ಯಶೀಲತೆಯನ್ನು ನಿರುತ್ಸಾಹಗೊಳಿಸುವ ನಡವಳಿಗಳು ಮೆರೆದಿರುವಾಗ ಸರ್ಕಾರಗಳ ಎಷ್ಟೇ ಹೊಸಹೊಸ ಶಬ್ದಾಡಂಬರದ ಯೋಜನೆಗಳೂ ತುಂಬ ದೂರ ಸಾಗಲಾರವು. ಉದ್ದೇಶ, ಆಚರಣೆ - ಇವುಗಳ ನಡುವೆ ಸುಸಂಬದ್ಧತೆ ಇದ್ದರೆ ಮಾತ್ರ ದೃಢವಾದ ಪ್ರಗತಿ ಸಾಧ್ಯವಾದೀತು. ಇಂತಹ ಪರಿವರ್ತನೆಗೆ ಮೊದಲ ಹೆಜ್ಜೆ ಎಂದರೆ ಸ್ಪಷ್ಟ ಚಿಂತನೆ, ಅಧ್ಯಯನಪೂರ್ಣ ಪರಾಮರ್ಶನೆ, ವಸ್ತುನಿಷ್ಠ ವಿಶ್ಲೇಷಣೆ. ಅರ್ಥಹೀನ ಪ್ರವೃತ್ತಿಗಳ ಮೂಲ ಎಲ್ಲಿದೆ, ಅವು ಹುಟ್ಟಿ ಬೆಳೆದು ಹರಡಿದುದು ಹೇಗೆ, ಅವುಗಳ ಪರಿಣಾಮಗಳು ಏನೇನಾಗಿವೆ - ಇವುಗಳನ್ನು ಆಳವಾಗಿ ಅಭ್ಯಾಸ ಮಾಡುವುದು ಅಗತ್ಯ. ಇದೀಗ ಫ್ಯಾಶನಬಲ್ ಎನಿಸಿರುವ ನಿಷ್ಪ್ರಯೋಜಕ ಭ್ರಮೆಗಳಿಂದ ಹೊರಕ್ಕೆ ಬರಬೇಕು. ಇತಿಹಾಸಪ್ರಜ್ಞೆಯಿಂದ ಕೂಡಿದ ನಿರ್ಮಲವಾದ ಪಾಂಡಿತ್ಯ ಮಾತ್ರ ಈಗ ಬೇಕಾಗಿರುವ ಬೆಳಕನ್ನು ಕೊಡಬಲ್ಲದು. ಈಗಿನ ಕಲುಷಿತ ವಾತಾವರಣದಲ್ಲಿ ಇಂತಹ ಸತ್ಯಶೋಧನೆಯು ಪ್ರವಾಹಕ್ಕೆ ಎದುರಾಗಿ ಈಜಿದಂತೆ. ಆದರೆ ಇದಕ್ಕೆ ಬೇರೆ ದಾರಿ ಇಲ್ಲ. ಅಧಿಷ್ಠಿತರ ಅಸಹನೆಯಿಂದಲೂ ದುಷ್ಪ್ರಚಾರದಿಂದಲೂ ಖಿನ್ನರಾಗದೆ ಸ್ವತಂತ್ರ ಮನೋವೃತ್ತಿಯವರು ದೃಢವಾದ ಹೆಜ್ಜೆಗಳನ್ನು ಇಡಬೇಕಾಗಿದೆ. ಈಚಿನ ವರ್ಷಗಳಲ್ಲಿ ವಿರಳ ಸಂಖ್ಯೆಯಲ್ಲಾದರೂ ಇಲ್ಲೊಬ್ಬ ಅಲ್ಲೊಬ್ಬ ಪ್ರಜ್ಞಾವಂತರು ಈ ವಿದ್ವತ್ಕಾರ್ಯದಲ್ಲಿ ತೊಡಗಿರುವುದು ಮೆಚ್ಚಬೇಕಾದ ಸಂಗತಿ. ಈ ವಿರಳ ಪ್ರಕಾರಕ್ಕೆ ಸೇರಿದ ಈಚಿನ ಒಂದು ಮಹತ್ತ್ವದ ಕೃತಿ 'ಭಾರತ ಭಂಜನ - ದ್ರಾವಿಡ ಮತ್ತು ದಲಿತ ಬಿರುಕುಗಳಲ್ಲಿ ಪಾಶ್ಚಾತ್ಯ ಕೈವಾಡ' (BREAKING INDIA: Western Interventions in Dravidian and Dalit Faultlines').

ಭಾರತವನ್ನು ಕುರಿತ ಸಂವಾದವೆಲ್ಲ ಪಾಶ್ಚಾತ್ಯಾಭಿಮುಖರಿಂದಲೇ ನಡೆಯುತ್ತಿರುವುದು ಏಕೆ? ಅಂತಹ ದುಸ್ತರ್ಕಗಳನ್ನು ಪೋಷಿಸುತ್ತಿರುವ ಪಾಶ್ಚಾತ್ಯ ಸಂಸ್ಥೆಗಳಿಗೆ ಸರಿಗಟ್ಟಬಲ್ಲ ದೇಶೀಯ ಸಂಸ್ಥೆಗಳನ್ನು ರೂಪಿಸುವುದರಲ್ಲಿ ಭಾರತೀಯರು ಏಕೆ ಹಿಂದೆಬಿದ್ದಿದ್ದಾರೆ? ಇಂತಹವು ಪ್ರಕೃತ ಗ್ರಂಥವನ್ನು ಓದುವವರ ಮನಸ್ಸಿನಲ್ಲಿ ಹುಟ್ಟುವ ಪ್ರಶ್ನೆಗಳು. ಈ ದಿಕ್ಕಿನ ಚಿಂತನೆಯನ್ನು ಮುನ್ನೆಲೆಗೆ ತಂದು ರಾಜೀವ್ ಮಲ್ಹೋತ್ರಾ ಮತ್ತು ಅರವಿಂದನ್ ನೀಲಕಂಡನ್ ದೊಡ್ಡ ಉಪಕಾರ ಮಾಡಿದ್ದಾರೆ. ಈ ಗ್ರಂಥದಲ್ಲಿನ ಮಂಡನೆ ಆಳವಾದ ಸಂಶೋಧನೆಯ ಆಧಾರದ ಮೇಲೆ ಹೊಮ್ಮಿದೆ. ತಿಳಿವಳಿಕೆಯ ಕೊರತೆಯಿಂದಲೋ ಸ್ವಾಭಾವಿಕ ಉದಾಸೀನತೆಯಿಂದಲೋ ಇದುವರೆಗೆ ಅಲಕ್ಷ್ಯ ಮಾಡಿದ ಕಾರಣದಿಂದ ಈಗ ಸಮಸ್ಯೆಗಳು ಉಲ್ಬಣಿಸಿ ಅವನ್ನು ನಿರ್ವಹಿಸಲೇಬೇಕಾದ ಸ್ಥಿತಿಯುಂಟಾಗಿದೆ.

ಭಾರತ ಭಂಜನ
ಲೇಖಕರು:
ಮಲ್ಹೋತ್ರ & ಅರವಿಂದನ್ ನೀಲಕಂಡನ್
ಅನುವಾದಕರು :
ಲಕ್ಷ್ಮೀಕಾಂತ ಹೆಗಡೆ
ಪ್ರಕಾರ:
ಇತರೆ
ಪ್ರಕಾಶಕರು:
ವಸಂತ ಪ್ರಕಾಶನ
ಆಕಾರ:
1/8 ಡೆಮಿ (ಕೆ.ಎಸ್. ಬೈಂಡಿಂಗ್)
ಮುದ್ರಣ:
2014
ರಕ್ಷಾಪುಟ:
---
ಪುಟಗಳು:
734
ಬೆಲೆ:
500 ರೂ.
ಲೇಖಕರ ಪರಿಚಯ
ಲಕ್ಷ್ಮೀಕಾಂತ ಹೆಗಡೆ ಅವರು ಲೇಖಕರು, ಕವಿಗಳು ಹಾಗೂ ಅನುವಾದಕರು. ಇವರು ಅನುವಾದಿಸಿದ ಉಮರ ಕಯ್ಯಾಮನ ಪದ್ಯಗಳ ಸಂಗ್ರಹ ಮಧುಗೀತೆ ಸುಪ್ರಸಿದ್ಧವಾಗಿದೆ. ಇವರು ಋಗ್ವೇದ ಹಾಗೂ ಅಥರ್ವವೇದಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದಲ್ಲದೆ ಹತ್ತಕ್ಕೂ ಹೆಚ್ಚು ಕಿರು ಹಾಗೂ ಮಧ್ಯಮ ಗಾತ್ರದ ಪುಸ್ತಕಗಳನ್ನು ಇಂಗ್ಲಿಷ್ ಹಾಗೂ ಸಂಸ್ಕೃತ ಭಾಷೆಗಳಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರು ಇಂಜಿನೀಯರ್ ಆಗಿದ್ದು ಮೈಕೊ ಕಂಪೆನಿಯಲ್ಲಿ ಮೂವತ್ತು ವರ್ಷಗಳ ಸೇವೆ ಮಾಡಿ ನಿವೃತ್ತರಾಗಿದ್ದಾರೆ. ಜರ್ಮನಿ ಭಾಷೆಯಲ್ಲಿ ಕೂಡ ಇವರು ಪಾಂಡಿತ್ಯ ಹೊಂದಿದ್ದಾರೆ.