ಸಾರಾಂಶ

ಯೂರೋಪಿಯನ್ ಸಾಹಿತ್ಯದಲ್ಲಿ ಆಧುನಿಕ ಯುಗವು ಆರಂಭವಾದದ್ದೇ ಫ್ರಾನ್ಜ್ ಕಾಫ್ಕ(೧೮೮೩-೧೯೨೪)ನಿಂದ ಎಂಬ ಅಭಿಪ್ರಾಯವಿದೆ. ಕೇವಲ ನಲವತ್ತು ವರ್ಷ ಕಾಲ ಬದುಕಿದ್ದ ಅವನು ಬರೆದದ್ದು ಮೂರೇ ಕಾದಂಬರಿ (ಅದರಲ್ಲಿ ಒಂದು ಅಪೂರ್ಣ) ಮತ್ತು ಕೆಲವು ಸಣ್ಣಕತೆ. ಆದರೂ ಯೂರೋಪಿನ ಪ್ರಮುಖ ದಾರ್ಶನಿಕ ವಿವೇಚನೆಯ ಹಿನ್ನೆಲೆಯಲ್ಲಿ ಅವು ತಮ್ಮ ಸ್ಥಾನವನ್ನು ಪಡೆದುಕೊಂಡಿವೆ. ಇಂದು ಕಾಫ್ಕನ ಪ್ರಭಾವ ಜಗತ್ತಿನಾದ್ಯಂತ ವಿಸ್ತರಿಸಿದೆ. ಕನ್ನಡದ ನವ್ಯಸಾಹಿತ್ಯದಲ್ಲಿಯೂ ಇದನ್ನು ಗುರುತಿಸಬಹುದು.
ಅವನ ಮೊದಲ ಕಾದಂಬರಿ 'ದಿ ಟ್ರಯಲ್', ಅವನ ಅದ್ಭುತ ಸಣ್ಣಕತೆ 'ಮೆಟಮಾರ್ಫಸಿಸ್' - ಆಯಾ ಪ್ರಕಾರಗಳಲ್ಲಿ ವಿಶ್ವ ಸಾಹಿತ್ಯದಲ್ಲಿಯೇ ವಿಶಿಷ್ಟ ಸಾಧನೆಗಳೆಂದು ಹೆಸರುಗೊಂಡಿವೆ. ಆಧುನಿಕ ಮನುಷ್ಯನ ತಬ್ಬಲಿತನ ಮತ್ತು ದಿಗ್ಭ್ರಾಂತಿಗಳನ್ನು ಕಾಫ್ಕನಷ್ಟು ನೈಜವಾಗಿ, ಮನೋಜ್ಞವಾಗಿ, ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದವರು ಮತ್ತೊಬ್ಬರಿಲ್ಲ.
ಕಾಫ್ಕನ ಬದುಕು-ಬರಹ-ಪ್ರತಿಭೆಗಳನ್ನು, ವಿಶೇಷವಾಗಿ 'ದಿ ಟ್ರಯಲ್' ಹಾಗೂ 'ಮೆಟಮಾರ್ಫಸಿಸ್'ಗಳನ್ನು ಈ ಕಿರುಹೊತ್ತಿಗೆಯಲ್ಲಿ ಸಮಗ್ರವಾಗಿ ವಿಶ್ಲೇಷಿಸಲಾಗಿದೆ. ನಾಲ್ಕು ದಶಕಗಳ ಹಿಂದೆ ಪ್ರಕಟವಾಗಿದ್ದ ಈ ವಿಮರ್ಶಾ ಕೃತಿ ಬಹುಶಃ ಕಾಫ್ಕನನ್ನು ಕುರಿತು ಕನ್ನಡದಲ್ಲಿ ಬಂದಿರಬಹುದಾದ ಮೊದಲ ಕೃತಿಯಾಗಿದೆ.

ಫ್ರಾನ್ಜ್ ಕಾಫ್ಕ ಬದುಕು ಸಾಹಿತ್ಯ ಚಿಂತನೆ
ಲೇಖಕರು:
ಪ್ರೊ ಎಲ್ ಎಸ್ ಶೇಷಗಿರಿ ರಾವ್
ಪ್ರಕಾರ:
ಇತರೆ
ಪ್ರಕಾಶಕರು:
ವಸಂತ ಪ್ರಕಾಶನ
ಆಕಾರ:
1/8 ಡೆಮಿ
ಮುದ್ರಣ:
2014
ರಕ್ಷಾಪುಟ:
ರಘು ಅಪಾರ
ಪುಟಗಳು:
96
ಬೆಲೆ:
70 ರೂ.
ಲೇಖಕರ ಪರಿಚಯ
ಪ್ರೊ ಎಲ್.ಎಸ್. ಶೇಷಗಿರಿ ರಾವ್ ಅವರು ಹುಟ್ಟಿದ್ದು ೧೯೨೫ರಲ್ಲಿ, ಬೆಂಗಳೂರಿನಲ್ಲಿ. ಇಂಗ್ಲಿಷ್ ಭಾಷೆ, ಸಾಹಿತ್ಯಗಳಲ್ಲಿ ಬಂಗಾರದ ಪದಕಗಳೊಡನೆ ಎಂ.ಎ. ಪದವಿ ಪಡೆದ ಅವರು ಹಲವು ಸರ್ಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಇಂಗ್ಲಿಷ್ ವಿಭಾಗದಿಂದ ನಿವೃತ್ತರಾದರು. ನಂತರ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು. ಕನ್ನಡ ಪುಸ್ತಕ ಪ್ರಾಧಿಕಾರದ ಮೊದಲನೆಯ ಅಧ್ಯಕ್ಷರು ಅವರು. ಹಲವು ದೇಶಗಳ ಸಾಹಿತ್ಯಗಳ ಅಧ್ಯಯನದ ಫಲವನ್ನು ಧಾರೆ ಎರೆದು ಕನ್ನಡ ಸಾಹಿತ್ಯ ವಿಮರ್ಶೆಗೆ ಹೊಸ ಚೈತನ್ಯ ತಂದುಕೊಡುವ ಮೂಲಕ ವಿಮರ್ಶಾ ಕ್ಷೇತ್ರದಲ್ಲಿ ಅಗ್ರಗಣ್ಯರೆನಿಸಿದ ರಾಯರು ಎಪ್ಪತ್ತೈದಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಸಣ್ಣಕತೆಗಳು, ವಿಮರ್ಶಾ ಕೃತಿಗಳು, ಸಾಹಿತ್ಯ ಚರಿತ್ರೆಗಳು, ಜೀವನ ಚಿತ್ರಗಳು, ಭಾಷಾಂತರಗಳು, ನಿಘಂಟುಗಳು, ಇಂಗ್ಲಿಷಿನಲ್ಲಿ ರಚಿಸಿದ ಗ್ರಂಥಗಳು ಸೇರಿವೆ. ಭಾರತ-ಭಾರತಿ ಪುಸ್ತಕ ಸಂಪದದ ಪ್ರಧಾನ ಸಂಪಾದಕರಾಗಿ, ಕನ್ನಡ ಭಾರತಿ, ಭಾರತೀಯ ಸಾಹಿತ್ಯ ಸಮೀಕ್ಷೆ, ಸ್ವಾತಂತ್ರ್ಯೋತ್ತರ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ, ಕಿರಿಯರ ಕರ್ನಾಟಕ, ಜ್ಞಾನ ಗಂಗೋತ್ರಿ, ಸಪ್ನಾ ಜ್ಞಾನ ದೀಪಮಾಲೆ, ಸಪ್ನಾ ದಿವ್ಯ ದರ್ಶನ ಮಾಲೆ ಮೊದಲಾದ ಹಲವು ಗ್ರಂಥ ಯೋಜನೆಗಳ ಸಂಪಾದಕರಾಗಿ ಅವರು ನೀಡಿರುವ ಕೊಡುಗೆ ಅನನ್ಯವಾದುದು. ಜೊತೆಗೆ ಅನೇಕ ಸಂಘ-ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ಕಾರ್ಯ ಸಮಿತಿಗಳ ಸದಸ್ಯರಾಗಿ ಕನ್ನಡ ನಾಡು, ನುಡಿಯ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿಯಲ್ಲಿ ನಡೆದ ೭೪ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಚುನಾಯಿಸುವ ಮೂಲಕ ಅವರನ್ನು ಗೌರವಿಸಿದೆ. ಅವರು ಪಡೆದಿರುವ ಪ್ರಶಸ್ತಿಗಳಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಅ.ನ.ಕೃ. ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಮುಖ್ಯವಾದುವು. ಕನ್ನಡ ಸಾಹಿತ್ಯವನ್ನು ಭಾರತದ ಬೇರೆ ಬೇರೆ ಭಾಷೆಗಳಿಗೆ ಪರಿಚಯಿಸಿದ ಕೆಲವೇ ಕೆಲವರಲ್ಲಿ ರಾಯರದು ಎದ್ದುಕಾಣುವ ಹೆಸರು.