ಸಾರಾಂಶ

ಕನ್ನಡಕ್ಕೆ ಇಡೀ ದೇಶದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯ ಜ್ಞಾನಪೀಠ
ಪ್ರಶಸ್ತಿಗಳನ್ನು ತಂದುಕೊಟ್ಟಿರುವ ನಮ್ಮ ಎಂಟು ಜನ ಹೆಸರಾಂತ ಸಾಹಿತಿಗಳನ್ನು ಕಂಡರೆ ನಮ್ಮೆಲ್ಲರಿಗೂ ಅಕ್ಕರೆ, ಗೌರವ. ಅನೇಕ ಮೌಲಿಕ ಕೃತಿಗಳ ಕಣಜ ನಮ್ಮ ಸಾಹಿತ್ಯ ಲೋಕವೆಂಬುದು ಸರ್ವವಿಧಿತ. ದೇಶದ ಇತರ ಭಾಷಾಮಿತ್ರರು ಕುತೂಹಲದಿಂದ ಗಮನಿಸುವ ಈ ಮಹಾ ಸಾಧನೆಗೆ ಕಾರಣರಾಗಿರುವ ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕೆ. ಶಿವರಾಮ ಕಾರಂತ, ವಿ.ಕೃ. ಗೋಕಾಕ್,
ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಮತ್ತು ಚಂದ್ರಶೇಖರ ಕಂಬಾರ ಅವರುಗಳು ಬೆಳೆದು ಬಂದ ಬಗೆಯನ್ನೂ ಅವರ ಕೃತಿಗಳನ್ನೂ ಅವರ ಸಾಧನೆಗಳನ್ನೂ ಪ್ರಸ್ತುತ ಪುಸ್ತಕದಲ್ಲಿ ವಿವರವಾಗಿ ಪರಿಚಯಿಸಿಕೊಟ್ಟಿದ್ದಾರೆ, ಹಿರಿಯ ಲೇಖಕ ಜಿ.ಎಂ. ಕೃಷ್ಣಮೂರ್ತಿಯವರು. 'ಭಾರತೀಯ ಜ್ಞಾನಪೀಠ ಪ್ರಶಸ್ತಿ' ಕುರಿತೂ ಅವರು ಒಂದು ಅಧ್ಯಾಯವನ್ನು ಕೃತಿಯಲ್ಲಿ ಜೋಡಿಸಿದ್ದಾರೆ.
ಈ ಮಹಾ ಸಾಧಕರ ಕುರಿತು ಓದುವುದೇ ಒಂದು ವಿಶಿಷ್ಟ ಅನುಭವ. ಈ ಹಿರಿಯರ ಚಿಂತನಾ ಮೂಸೆಗಳಿಂದ ಮೂಡಿಬಂದ ಆಲೋಚನೆಗಳನ್ನು ತಿಳಿದುಕೊಳ್ಳುವುದೇ ಚೇತೋಹಾರಿ. ಕನ್ನಡದ ಎಳೆಯ ಮನಸ್ಸುಗಳಲ್ಲಿ ತಾವೂ ಕನ್ನಡದಲ್ಲಿ ಬರೆಯಬೇಕೆನ್ನುವ, ತಮ್ಮ ಕನ್ನಡದ ಓದನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬೇಕೆನ್ನುವ ಪ್ರೇರಣೆಯನ್ನು ಈ ಕೃತಿ ಒದಗಿಸಿದರೆ ನಮ್ಮ ಶ್ರಮ ಸಾರ್ಥಕ.

ಜ್ಞಾನಪೀಠ ಪುರಸ್ಕೃತ ಕನ್ನಡ ಸಾಹಿತಿಗಳು
ಲೇಖಕರು:
ಜಿ ಎಂ ಕೃಷ್ಣಮೂರ್ತಿ
ಪ್ರಕಾರ:
ಇತರೆ
ಪ್ರಕಾಶಕರು:
ವಸಂತ ಪ್ರಕಾಶನ
ಆಕಾರ:
1/8 ಡೆಮಿ
ಮುದ್ರಣ:
2017
ರಕ್ಷಾಪುಟ:
ಅರುಣ್
ಪುಟಗಳು:
100
ಬೆಲೆ:
176 ರೂ.
ಲೇಖಕರ ಪರಿಚಯ
ಕನ್ನಡದ ಹಿರಿಯ ಲೇಖಕರಾದ ಜಿ.ಎಂ. ಕೃಷ್ಣಮೂರ್ತಿಯವರು ಜನಿಸಿದ್ದು ೧೯೪೦ರಲ್ಲಿ, ಶಿವಮೊಗ್ಗ ನಗರದಲ್ಲಿ. ೧೯೫೭ರ ವರೆಗೂ ಅಲ್ಲಿಯೇ ಶಿಕ್ಷಣ ಪಡೆದು ಎಸ್ಎಸ್ಎಲ್ಸಿ ಆದ ತರುವಾಯ ಕೆಲವು ಸಮಯ ಸರ್ಕಾರಿ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ, ನಂತರ ಮತ್ತೆ ಕೆಲವು ಕಾಲ ಅರಣ್ಯ ಇಲಾಖೆಯಲ್ಲಿ ಗಾರ್ಡ್ ಆಗಿ ಸೇವೆ ಸಲ್ಲಿಸಿದರು. ೧೯೫೯ರಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ಎರಡನೆ ದರ್ಜೆ ಸಹಾಯಕರಾಗಿ ಸೇರಿ ೧೯೮೫ರಲ್ಲಿ ಸ್ವಯಂ-ನಿವೃತ್ತಿ ಪಡೆದರು. ಪ್ರಸ್ತುತ ಬೆಂಗಳೂರಿನಲ್ಲಿದ್ದುಕೊಂಡು ಸಾಹಿತ್ಯ ಕೃಷಿ ನಡೆಸಿದ್ದಾರೆ. ಜಿಎಂಕೆಯವರು ತಮ್ಮ ಶಿಕ್ಷಣವನ್ನು ಮುಂದುವರಿಸಬೇಕೆಂಬ ಹಂಬಲದಿಂದ ಸಂಜೆ ಕಾಲೇಜಿನಲ್ಲಿ ಓದಿ ಬಿ.ಎ. ಪದವಿ ಪಡೆದರು; ನಂತರ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ವೇತನವಿಲ್ಲದ ರಜೆ ಪಡೆದು ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ.(ಕನ್ನಡ) ಪದವಿಯನ್ನು ಪ್ರಥಮ ದರ್ಜೆಯಲ್ಲಿ ತಮ್ಮದಾಗಿಸಿಕೊಂಡರು. ಡಾ. ದ.ರಾ. ಬೇಂದ್ರೆ, ಡಾ.ಬಿ.ಆರ್. ಅಂಬೇಡ್ಕರ್ ಅವರುಗಳನ್ನು ಕುರಿತಂತೆ ವ್ಯಕ್ತಿ ಚಿತ್ರಣ ಕೃತಿಗಳನ್ನು ತಂದಿರುವ ಜಿಎಂಕೆಯವರು ಅಡಾಲ್ಫ್ ಹಿಟ್ಲರನ ‘ಮೈನ್ ಕಾಂಪ್’ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಬೆದೆ ಬಂತು ಬೆನಕನಿಗೆ (ಕಾದಂಬರಿ), ಒಂದು ಜೀವನದ ಚರಿತ್ರೆ (ಕಥಾಸಂಕಲನ), ಮೋಹನದಾಸ್ ಕರಮ್ಚಂದ್ ಗಾಂಧಿ (ಆತ್ಮಕಥೆ), ವಿಶ್ವವಿಖ್ಯಾತ ಪುರಾಣಗಳು (ಅನುವಾದ), ಮಹಾಕವಿ ಕಾಳಿದಾಸ, ಭಗವಾನ್ ಬುದ್ಧ (ವ್ಯಕ್ತಿ ಚಿತ್ರಣ) ಮೊದಲಾದ ೫೦ಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ; ಅನುವಾದ ಮಾಡಿದ್ದಾರೆ. ಅಲ್ಲದೆ ಕೆಲವಾರು ಕೃತಿಗಳ ಸಂಪಾದನೆ ಮಾಡಿದ್ದಾರೆ. ವಿಜ್ಞಾನ, ಸಾಹಿತ್ಯ, ನೀತಿಕಥೆಗಳು, ವ್ಯಕ್ತಿತ್ವ ವಿಕಸನ, ಆರ್ಥಿಕ ವಿಷಯ, ಪುರಾಣ, ಚರಿತ್ರೆ, ಸಾಮಾಜಿಕ ವಿಷಯಗಳು-ಹೀಗೆ ಜಿಎಂಕೆಯವರ ಕಾರ್ಯವ್ಯಾಪ್ತಿ ವಿಶಾಲವಾದ ಕ್ಯಾನ್ವಾಸಿನದು.