ಸಾರಾಂಶ

ನಮ್ಮ ದೇಶದಲ್ಲಿ ರಾಮ, ಸೀತೆ, ಧರ್ಮರಾಯ, ಭೀಮ, ದುರ್ಯೋಧನ, ದುಶ್ಶಾಸನ, ದ್ರೌಪದಿ, ಕೃಷ್ಣ, ಕಂಸ, ಬಲರಾಮ ಮೊದಲಾದ ಹೆಸರುಗಳನ್ನು ಕೇಳದವರಾರು? ಭಾರತೀಯರಿಗೆ ಇವು ಕೇವಲ ಹೆಸರುಗಳಲ್ಲ, ಒಳಿತನ್ನು, ಕೆಡುಕನ್ನು, ಧರ್ಮ-ಅಧರ್ಮಗಳನ್ನು, ಮೌಲ್ಯ, ಸಂಸ್ಕೃತಿಗಳನ್ನು ಪ್ರತಿನಿಧಿಸುವ ಪ್ರತೀಕಗಳು. ಹೆತ್ತವರು ತಮ್ಮ ಮಕ್ಕಳಿಗೆ ಇಂಥ ಹೆಸರು ಗಳನ್ನು ಇಡುವುದುಂಟು. ಉದಾಹರಣೆಗೆ ರಘುನಾಥ, ಸೀತಾಪತಿ, ವೇಣು ಗೋಪಾಲ, ಮಾರುತಿ, ವೈದೇಹಿ, ಇತ್ಯಾದಿ. ಮಕ್ಕಳು ಶಾಲೆಗೆ ಸೇರುವ ಮೊದಲೇ ಹಿರಿಯರಿಂದ ಇಂಥವರ ಕೆಲವು ಕತೆಗಳನ್ನು ಕೇಳಿರುವುದೂ ಉಂಟು. ನಮ್ಮ ಜನಸಾಮಾನ್ಯರ ದೃಷ್ಟಿಯಲ್ಲಿ ಸೀತೆ, ಧರ್ಮರಾಯ, ಲಕ್ಷ್ಮಣ, ಭೀಮ, ಆಂಜನೇಯ ಒಳ್ಳ್ಳೆಯ ನಡತೆಯನ್ನು ಬಿಂಬಿಸುವವರು; ದುರ್ಯೋಧನ, ದುಶ್ಶಾಸನ, ರಾವಣ, ಶೂರ್ಪನಖಿ ಮೊದಲಾದವರದು ಕೆಟ್ಟ ಗುಣಗಳು. ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಸಮಾಜದ ಎಲ್ಲ ವರ್ಗಗಳ ಜನರಿಗೂ ಪ್ರಿಯವಾಗಿರುವ ಇಂಥವರ ಕತೆಗಳಿಗೆ ರಾಮಾಯಣ, ಮಹಾಭಾರತ, ಭಾಗವತ ಗ್ರಂಥಗಳೇ ಮೂಲ. ನಮ್ಮಲ್ಲಿ ಕಾವ್ಯ, ಕಥೆ, ನಾಟಕ, ಶಿಲ್ಪಕಲೆ, ನೃತ್ಯಕಲೆ, ಚಿತ್ರಕಲೆ ಎಲ್ಲವುಗಳಲ್ಲಿ ಈ ಗ್ರಂಥಗಳ ಪಾತ್ರ, ಸಂಗತಿಗಳು ಹರಳುಗಟ್ಟಿವೆ. ಹೀಗೆ ನಾಡಿನ ಜನಜೀವನದ, ಸಂಸ್ಕೃತಿಯ ಒಂದು ಭಾಗವೇ ಆಗಿಬಿಟ್ಟಿರುವ ಈ ಗ್ರಂಥಗಳನ್ನು ನಮ್ಮ ಮಕ್ಕಳು ಸಂಗ್ರಹರೂಪದಲ್ಲಾದರೂ ಓದುವುದು ಅತ್ಯಗತ್ಯ. ಪ್ರಸಿದ್ಧ ಲೇಖಕ, ವಿಮರ್ಶಕ ಪ್ರೊ. ಎಲ್.ಎಸ್. ಶೇಷಗಿರಿ ರಾವ್ ಕಿರಿಯ ಓದುಗರಿಗೆಂದೇ ಬರೆದಿರುವ ಮೂರು ಪುಸ್ತಕಗಳು ಕಿರಿಯರ ರಾಮಾಯಣ, ಕಿರಿಯರ ಮಹಾಭಾರತ ಮತ್ತು ಕಿರಿಯರ ಭಾಗವತ. ಮೂಲ ಕೃತಿಗಳ ಸಾರರೂಪವಾಗಿರುವ ಈ ಕೃತಿಗಳಲ್ಲಿ ಸರಳ ಸುಂದರ ಭಾಷೆಯಿದೆ, ಆತ್ಮೀಯ ನಿರೂಪಣೆಯಿದೆ, ಓದುಗರ ಮನಸ್ಸನ್ನು ಹಿಡಿದಿಡುವ ಸರಸ ಶೈಲಿಯಿದೆ, ಮಾಗಿದ ಚೇತನವೊಂದರ ಜೀವನದರ್ಶನವಿದೆ. ಹಾಗಾಗಿ ಇವುಗಳನ್ನು ಓದುವುದೇ ಒಂದು ಹಬ್ಬ.

ಕಿರಿಯರ ಮಹಾಭಾರತ
ಲೇಖಕರು:
ಪ್ರೊ ಎಲ್ ಎಸ್ ಶೇಷಗಿರಿ ರಾವ್
ಅನುವಾದಕರು :
ಪ್ರೊ ಎಲ್ ಎಸ್ ಶೇಷಗಿರಿ ರಾವ್
ಪ್ರಕಾರ:
ಕಥೆ
ಪ್ರಕಾಶಕರು:
ವಸಂತ ಪ್ರಕಾಶನ
ಆಕಾರ:
1/8 ಡೆಮಿ
ಮುದ್ರಣ:
2010
ರಕ್ಷಾಪುಟ:
ಚಂದ್ರನಾಥ ಆಚಾರ್ಯ
ಪುಟಗಳು:
160
ಬೆಲೆ:
80 ರೂ.
ಲೇಖಕರ ಪರಿಚಯ
ಪ್ರೊ ಎಲ್.ಎಸ್. ಶೇಷಗಿರಿ ರಾವ್ ಅವರು ಹುಟ್ಟಿದ್ದು ೧೯೨೫ರಲ್ಲಿ, ಬೆಂಗಳೂರಿನಲ್ಲಿ. ಇಂಗ್ಲಿಷ್ ಭಾಷೆ, ಸಾಹಿತ್ಯಗಳಲ್ಲಿ ಬಂಗಾರದ ಪದಕಗಳೊಡನೆ ಎಂ.ಎ. ಪದವಿ ಪಡೆದ ಅವರು ಹಲವು ಸರ್ಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಇಂಗ್ಲಿಷ್ ವಿಭಾಗದಿಂದ ನಿವೃತ್ತರಾದರು. ನಂತರ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು. ಕನ್ನಡ ಪುಸ್ತಕ ಪ್ರಾಧಿಕಾರದ ಮೊದಲನೆಯ ಅಧ್ಯಕ್ಷರು ಅವರು. ಹಲವು ದೇಶಗಳ ಸಾಹಿತ್ಯಗಳ ಅಧ್ಯಯನದ ಫಲವನ್ನು ಧಾರೆ ಎರೆದು ಕನ್ನಡ ಸಾಹಿತ್ಯ ವಿಮರ್ಶೆಗೆ ಹೊಸ ಚೈತನ್ಯ ತಂದುಕೊಡುವ ಮೂಲಕ ವಿಮರ್ಶಾ ಕ್ಷೇತ್ರದಲ್ಲಿ ಅಗ್ರಗಣ್ಯರೆನಿಸಿದ ರಾಯರು ಎಪ್ಪತ್ತೈದಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಸಣ್ಣಕತೆಗಳು, ವಿಮರ್ಶಾ ಕೃತಿಗಳು, ಸಾಹಿತ್ಯ ಚರಿತ್ರೆಗಳು, ಜೀವನ ಚಿತ್ರಗಳು, ಭಾಷಾಂತರಗಳು, ನಿಘಂಟುಗಳು, ಇಂಗ್ಲಿಷಿನಲ್ಲಿ ರಚಿಸಿದ ಗ್ರಂಥಗಳು ಸೇರಿವೆ. ಭಾರತ-ಭಾರತಿ ಪುಸ್ತಕ ಸಂಪದದ ಪ್ರಧಾನ ಸಂಪಾದಕರಾಗಿ, ಕನ್ನಡ ಭಾರತಿ, ಭಾರತೀಯ ಸಾಹಿತ್ಯ ಸಮೀಕ್ಷೆ, ಸ್ವಾತಂತ್ರ್ಯೋತ್ತರ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ, ಕಿರಿಯರ ಕರ್ನಾಟಕ, ಜ್ಞಾನ ಗಂಗೋತ್ರಿ, ಸಪ್ನಾ ಜ್ಞಾನ ದೀಪಮಾಲೆ, ಸಪ್ನಾ ದಿವ್ಯ ದರ್ಶನ ಮಾಲೆ ಮೊದಲಾದ ಹಲವು ಗ್ರಂಥ ಯೋಜನೆಗಳ ಸಂಪಾದಕರಾಗಿ ಅವರು ನೀಡಿರುವ ಕೊಡುಗೆ ಅನನ್ಯವಾದುದು. ಜೊತೆಗೆ ಅನೇಕ ಸಂಘ-ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ಕಾರ್ಯ ಸಮಿತಿಗಳ ಸದಸ್ಯರಾಗಿ ಕನ್ನಡ ನಾಡು, ನುಡಿಯ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿಯಲ್ಲಿ ನಡೆದ ೭೪ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಚುನಾಯಿಸುವ ಮೂಲಕ ಅವರನ್ನು ಗೌರವಿಸಿದೆ. ಅವರು ಪಡೆದಿರುವ ಪ್ರಶಸ್ತಿಗಳಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಅ.ನ.ಕೃ. ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಮುಖ್ಯವಾದುವು. ಕನ್ನಡ ಸಾಹಿತ್ಯವನ್ನು ಭಾರತದ ಬೇರೆ ಬೇರೆ ಭಾಷೆಗಳಿಗೆ ಪರಿಚಯಿಸಿದ ಕೆಲವೇ ಕೆಲವರಲ್ಲಿ ರಾಯರದು ಎದ್ದುಕಾಣುವ ಹೆಸರು.