ಸಾರಾಂಶ

ಕಲಾಂ ಅವರ ಕಡೆಯ ಪುಸ್ತಕ
ಒಂದು ದೇಶವನ್ನು ಮಹಾನ್ ಆಗಿ ರೂಪಿಸುವುದು ಯಾವುವು? ಕೇವಲ ಅದರ ಆರ್ಥಿಕ ಪ್ರಗತಿ ಮತ್ತು ಮಿಲಿಟರಿ ಶಕ್ತಿಯೆ-ಅಥವಾ ಅದಕ್ಕೂ ಮಿಗಿಲಾದುದು ಇದೆಯೆ? ಒಂದು ದೇಶವಾಗಿ ನಮ್ಮೆಲ್ಲ ಯೋಜನೆಗಳು, ಹೂಡಿಕೆಗಳು ಮತ್ತು ಕಾರ್ಯ ಯೋಜನೆಗಳು ಒಂದು ಮಹತ್ವದ ಗುರಿಯತ್ತ ಕರೆದೊಯ್ಯಲಿರುವ ಕೊನೆಯ ಮೈಲಿನ ಪಯಣವನ್ನು ಪೂರೈಸಲು ನಮಗೆ ಬೇಕಿರುವುದಾದರೂ ಏನು?
ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವೆಂದು ಕರೆಯಲ್ಪಡಲು ಉಳಿದಿರುವುದು ಕೆಲವೇ ಕಾಲವಷ್ಟೆ. ಆದರೆ ಒಂದು ರಾಷ್ಟ್ರ ಕಠಿಣ ಪರಿಸ್ಥಿತಿಗಳಲ್ಲೂ ಬದುಕುಳಿಯುವ ಬಗೆಯನ್ನು ಕಲಿಯಬೇಕು. ಇದರ ಸಲುವಾಗಿ ಬೇಕಿರುವುದು ರಾಷ್ಟ್ರೀಯ ವ್ಯಕ್ತಿತ್ವ ಎನ್ನುವ ಮೌಲ್ಯ. ಇದು ನಮ್ಮ ನಮ್ಮ ಕುಟುಂಬಗಳಲ್ಲಿ, ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಶಾಲೆಗಳಲ್ಲಿ, ಮತ್ತು ದೇಶದ ಸಂಸ್ಕೃತಿಯಲ್ಲಿ ಅಂತರ್ಗತವಾಗಿರುವ ಮೌಲ್ಯಗಳಿಂದ ರೂಪುಗೊಳ್ಳುವಂತಹುದು.
ತಮ್ಮ 'ಮಹತ್ವದ ಮಾರ್ಗಗಳು' ಕೃತಿಯಲ್ಲಿ ಭಾರತರತ್ನರೂ ಮಾಜಿ ರಾಷ್ಟ್ರಪತಿಗಳೂ ಆದ ಎಪಿಜೆ ಅಬ್ದುಲ್ ಕಲಾಂ ಅವರು ೨೦೨೦ರ ಹೊತ್ತಿಗೆ ಭಾರತದ ಆರ್ಥಿಕ ಪ್ರಗತಿ ಎಂಬ ಕಾಣ್ಕೆಯಿಂದ ಹೊರಳಿ ನಮ್ಮ ಶಕ್ತಿ ಸಾಮರ್ಥ್ಯಗಳ ಅಭಿವೃದ್ಧಿಯತ್ತ ತಮ್ಮ ಗಮನವನ್ನು ಹರಿಸಿದ್ದಾರೆ; ಬದಲಾವಣೆಯ ಬಲವನ್ನು ಭಾರತ ತಾಳಿಕೊಳ್ಳುವತ್ತ ಮುಖ್ಯ ಸಲಹೆಗಳನ್ನು ನೀಡಿದ್ದಾರೆ. ಒಂದು ರಾಷ್ಟ್ರ ಮಹಾನ್ ಆಗುವುದು ಹೇಗೆಂಬುದನ್ನು ಗುರುತಿಸುವ ಅವರು ಭಾರತೀಯರು ಹಾಗೂ ಇತರ ದೇಶವಾಸಿಗಳ ಬದುಕಿನ ಮಟ್ಟವನ್ನು ಹೋಲಿಸಿ ನೋಡಿದ್ದಾರೆ; ತಮ್ಮ ಇತರೆಡೆಗಿನ ತಿರುಗಾಟಗಳ ಸಂದರ್ಭಗಳಲ್ಲಿ ವಿವಿಧ ಜನರೊಡನೆ ನಡೆಸಿದ ಸಂವಹನಗಳನ್ನು ಚಿತ್ರಿಸಿದ್ದಾರೆ; ಪ್ರತಿಯೊಬ್ಬರಿಗೂ ಸಾಧ್ಯವಿರುವ ಅತ್ಯುತ್ತಮ ಬದುಕು ಖಾತರಿಗೊಳ್ಳಬೇಕೆನ್ನುವ ನಿಟ್ಟಿನಲ್ಲಿ ಬದುಕಿನ ವಿವಿಧ ರಂಗಗಳ ಜನರಿಗೆ ವಿಶಿಷ್ಟವಾದ ಶಪಥಗಳನ್ನು ರೂಪಿಸಿಕೊಟ್ಟಿದ್ದಾರೆ.
೨೦೧೫ರಲ್ಲಿ ತಾವು ನಿಧನರಾಗುವ ಕೆಲವೇ ತಿಂಗಳ ಮೊದಲು ಪೂರ್ಣಗೊಳಿಸಿದ ಈ ಕೃತಿಯಲ್ಲಿ ಸುಪ್ರಸಿದ್ಧರೂ ವಿನಯಶೀಲರೂ ಉನ್ನತ ಮೌಲ್ಯಗಳ ಪ್ರತಿಪಾದಕರೂ ಆದ
ಡಾ. ಕಲಾಂ ಅವರು ಮಹಾನ್ ಮಾರ್ಗಗಳಲ್ಲಿ ಸಾಗುತ್ತಿರುವ ನಮ್ಮ ದೇಶವು ಹೇಗೆ ನಾಯಕನಾಗಿ ಹೊರಹೊಮ್ಮಬಹುದು ಎಂಬುದನ್ನು ಚಿಂತಿಸಿದ್ದಾರೆ.

ಮಹತ್ವದ ಮಾರ್ಗಗಳು
ಲೇಖಕರು:
ಎ ಪಿ ಜೆ ಅಬ್ದುಲ್ ಕಲಾಂ
ಅನುವಾದಕರು :
ಜಿ ಕೆ ಮಧ್ಯಸ್ಥ
ಪ್ರಕಾರ:
ಇತರೆ
ಪ್ರಕಾಶಕರು:
ವಸಂತ ಪ್ರಕಾಶನ
ಆಕಾರ:
1/6 ಡೆಮಿ
ಮುದ್ರಣ:
2017
ರಕ್ಷಾಪುಟ:
---
ಪುಟಗಳು:
160
ಬೆಲೆ:
160 ರೂ.
ಲೇಖಕರ ಪರಿಚಯ
ಹಿರಿಯ ಪತ್ರಕರ್ತ ಜಿ.ಕೆ. ಮಧ್ಯಸ್ಥ ಅವರು ಹುಟ್ಟಿದ್ದು ೧೯೪೫ರಲ್ಲಿ; ಕಾಸರಗೋಡು ತಾಲೂಕಿನ ಬೇಳ ಗ್ರಾಮದ ಕುಂಜಾರು ಎಂಬಲ್ಲಿ. ಪ್ರಾರಂಭಿಕ ವಿದ್ಯಾಭ್ಯಾಸ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ. ನಂತರ ಕಾಸರಗೋಡಿನ ಸರ್ಕಾರಿ ಕಾಲೇಜಿನಿಂದ ಬಿ.ಎ. ಪದವಿ. ನಾಲ್ಕು ದಶಕಗಳ ಕಾಲ ಉದಯವಾಣಿ, ಮುಂಗಾರು, ಪ್ರಜಾವಾಣಿ ಹಾಗೂ ವಿಜಯಕರ್ನಾಟಕ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿರುವ ಅವರು ಆರ್ಥಿಕ ವಿಷಯಗಳನ್ನು ಕುರಿತಂತೆ ಹಾಗೂ ಶಬ್ದಗಳ ಹುಟ್ಟು ಮತ್ತು ಅವು ಪಡೆಯುವ ವಿವಿಧ ಸ್ವರೂಪಗಳನ್ನು ಕುರಿತಂತೆ ಕ್ರಮವಾಗಿ ದುಡ್ಡುಕಾಸು ಮತ್ತು ಪದೋನ್ನತಿ ಕೃತಿಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ ಡಾ. ಅಬ್ದುಲ್ ಕಲಾಂ ಅವರ ಟರ್ನಿಂಗ್ ಪಾಯಿಂಟ್ಸ್ ಮತ್ತು ನನ್ನ ಪಯಣ (ಮೈ ಜರ್ನಿ) ಆತ್ಮಕಥೆಗಳನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ತಂದಿದ್ದಾರೆ. ಅಲ್ಲದೆ, ಡಾ. ಕಲಾಂ ಅವರ ಜೀವನ ಚರಿತ್ರೆ ಕಲಾಂ ನಿಮಿಗಿದೋ ಸಲಾಂ ಕೃತಿಯನ್ನೂ ಬರೆದಿದ್ದಾರೆ