ಸಾರಾಂಶ

ನಮ್ಮ ದೇಶವನ್ನು ದೊಡ್ಡ ಮಟ್ಟದಲ್ಲಿ ಪೀಡಿಸುವ ಪಿಡುಗುಗಳೆಂದರೆ ಅನಕ್ಷರತೆ, ಅಜ್ಞಾನ. ಇದರ ಪರಿಣಾಮದಿಂದ ಜನತೆ ಹಲವು ಬಗೆಯ ದೈಹಿಕ, ಮಾನಸಿಕ ರೋಗಗಳಿಗೆ ಬಹುಬೇಗ ಬಲಿಯಾಗುವುದು ಕಂಡುಬರುತ್ತದೆ. ಇತ್ತೀಚಿನ ದಿನಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಕೆಲವು ವಿಶೇಷ ಕಾಯಿಲೆಗಳ ಜೊತೆಗೆ ಸಾಮಾನ್ಯವಾಗಿ ಎಲ್ಲರಿಗೂ ಬರಬಹುದಾದ ಕೆಲವು ರೋಗಗಳು ಸಮುದಾಯಗಳನ್ನು ಕಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇವುಗಳನ್ನು ಸಂಪೂರ್ಣ ತೊಡೆದುಹಾಕಲು ಸಾಧ್ಯವಾಗದಿದ್ದರೂ ನಿಯಂತ್ರಣದಲ್ಲಿಟ್ಟುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಲು ನಮ್ಮ ಜೀವನವನ್ನು ಕೆಲವು ಬಗೆಯ ಶಿಸ್ತುಗಳಿಗೆ ಒಳಗುಮಾಡಿಕೊಳ್ಳಬೇಕಾಗುತ್ತದೆ. ಆಹಾರ, ವ್ಯಾಯಾಮ, ಮಾನಸಿಕ ಒತ್ತಡ ಇವುಗಳನ್ನು ಸರಿಯಾದ ಕ್ರಮದಲ್ಲಿ ಪರಿಪಾಲಿಸಿದರೆ ಇದು ಕಾಡುವ ಕಾಯಿಲೆಯಾಗದೇ ತಡೆಗಟ್ಟಬಹುದಾದ ಜೀವನ ವಿನ್ಯಾಸವಾಗುತ್ತದೆ. ಇದಕ್ಕೆ ಅಗತ್ಯವಾದ ತಿಳಿವಳಿಕೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವಂತಹ ಕಾರ್ಯವನ್ನು 'ಆರೋಗ್ಯ ಚಿಂತನ ಮಾಲಿಕೆ'ಯ ಕೃತಿಗಳು ಮಾಡುತ್ತವೆ. ಪ್ರತಿಯೊಬ್ಬರಿಗೂ ಹೆಚ್ಚು ಕಾಲ ಬದುಕುವ ಇಚ್ಛೆ ಬಲವಾಗಿರುತ್ತದೆ. ಇವತ್ತು ವೈದ್ಯಕ್ಷೇತ್ರದಲ್ಲಿ ಆಕರಕೋಶಗಳ ಚಿಕಿತ್ಸೆಯ ಬೆಳವಣಿಗೆಯನ್ನು ಗಮನಿಸಿದರೆ ಚಿರಂಜೀವಿಯಾಗಬೇಕೆಂಬ ಬಯಕೆ ಎಲ್ಲರಲ್ಲೂ ಎದ್ದುಕಾಣುತ್ತಿದೆ. ಅಲ್ಲದೆ ಜೀವನಾವಧಿಯೂ ಹೆಚ್ಚಾಗಿದೆ. ಆದ್ದರಿಂದ ಜೀವನಾವಧಿಯಲ್ಲಿ ಆರೋಗ್ಯವಾಗಿ, ಇತರರ ಮೇಲೆ ಅವಲಂಬಿತರಾಗದಂತೆ ಬದುಕಬೇಕೆಂಬುದು ಎಲ್ಲರ ಆಶಯವಾಗಿದೆ. ಮರಣವನ್ನು ಮುಂದೂಡಬೇಕೆಂಬ ಬಯಕೆಯೂ ಸಹಜ. ಆ ನಿಟ್ಟಿನಲ್ಲಿ ಪ್ರಖ್ಯಾತ ಮನೋವೈದ್ಯ, ರಾಷ್ಟ್ರೀಯ ವಿಜ್ಞಾನ ಪ್ರಶಸ್ತಿ ಪುರಸ್ಕೃತ ಹಾಗೂ ವೈದ್ಯ ಸಾಹಿತ್ಯದ ದಿಗ್ಗಜರೆನಿಸಿರುವ ಡಾ. ಸಿ. ಆರ್. ಚಂದ್ರಶೇಖರ್‌ರವರು ಒಂದು ಆಮೂಲಾಗ್ರವಾದ ಮತ್ತು ಅಗತ್ಯವಿರುವ ಎಲ್ಲ ವಿವರಣೆಯನ್ನು 'ಮುಪ್ಪು ಮತ್ತು ಮರಣ ಮುಂದೂಡುವುದು ಹೇಗೆ?' ಕೃತಿಯಲ್ಲಿ ನೀಡಿದ್ದಾರೆ. ?

ಮುಪ್ಪು ಮತ್ತು ಮರಣ ಮುಂದೂಡುವುದು ಹೇಗೆ
ಲೇಖಕರು:
ಡಾ ಸಿ ಆರ್ ಚಂದ್ರಶೇಖರ್
ಪ್ರಕಾರ:
ಇತರೆ
ಪ್ರಕಾಶಕರು:
ವಸಂತ ಪ್ರಕಾಶನ
ಆಕಾರ:
1/8 ಡೆಮಿ
ಮುದ್ರಣ:
2016
ರಕ್ಷಾಪುಟ:
ಅರುಣ್
ಪುಟಗಳು:
142
ಬೆಲೆ:
110 ರೂ.
ಲೇಖಕರ ಪರಿಚಯ
ಡಾ. ಸಿ.ಆರ್. ಚಂದ್ರಶೇಖರ್ ಅವರು ಸುಪ್ರಸಿದ್ಧ ಮನೋವೈದ್ಯರಾಗಿರುವಂತೆಯೇ ಮಾನಸಿಕ ಸ್ವಾಸ್ಥ್ಯ ಕುರಿತಂತೆ ಕನ್ನಡದಲ್ಲಿ ಬರೆಯುತ್ತಿರುವ ಅಗ್ರಗಣ್ಯ ಲೇಖಕರೊಲ್ಲಬ್ಬರು. ೧೯೪೮ರ ಡಿಸೆಂಬರ್ ೧೨ರಂದು ಚನ್ನಪಟ್ಟಣದ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಜನಿಸಿದ ಅವರು ಎಂಬಿಬಿಎಸ್, ಎಂಡಿ, ಡಿಪಿಎಂ ಪದವೀಧರರು. ವಿಖ್ಯಾತ ನಿಮ್ಹಾನ್ಸ್ ಆಸ್ಪತ್ರೆಯ ಮನೋವೈದ್ಯ ವಿಭಾಗದಲ್ಲಿ ವೈದ್ಯರಾಗಿಯೂ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿ ನಿವೃತ್ತರಾದ ನಂತರ, ಪ್ರಸ್ತುತ ಬನ್ನೇರುಘಟ್ಟ ರಸ್ತೆಯಲ್ಲಿರುವ ’ಸಮಾಧಾನ ಕೇಂದ್ರ’ದಲ್ಲಿ ಮನೋರೋಗಿಗಳಿಗೆ ಉಚಿತ ಸಲಹೆ, ಚಿಕಿತ್ಸೆ ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ೪೦ಕ್ಕೂ ಹೆಚ್ಚು ವರ್ಷಗಳ ಕಾಲ ಮನೋವೈದ್ಯರಾಗಿ ಸೇವೆ ಸಲ್ಲಿಸಿರುವ ಡಾ. ಸಿಆರ್‌ಸಿ ವೈದ್ಯಕೀಯ ವಿಷಯಗಳ ಲೇಖಕರಾಗಿಯೂ ಅದ್ವಿತೀಯ ಕೆಲಸ ಮಾಡಿದ್ದಾರೆ. ಪತ್ರಿಕೆಗಳಲ್ಲಿ ೧೦೦೦ಕ್ಕೂ ಹೆಚ್ಚು ಲೇಖನಗಳು, ೨೦೦ಕ್ಕೂ ಹೆಚ್ಚು ಆರೋಗ್ಯದ ಬಗ್ಗೆ ಕನ್ನಡದಲ್ಲಿ ಪುಸ್ತಕಗಳು, ೨೨ ಇಂಗ್ಲಿಷ್ ಪುಸ್ತಕಗಳು ಅವರ ಲೇಖನಿಯಿಂದ ಮೂಡಿಬಂದಿವೆ. ೧೨೦ಕ್ಕೂ ಹೆಚ್ಚಿನ ವೈದ್ಯಕೀಯ ಕೃತಿಗಳನ್ನು ಸಂಪಾದಿಸಿರುವ ಅವರ ಕೆಲವು ಪುಸ್ತಕಗಳು ತೆಲುಗು, ಉರ್ದು, ಹಿಂದಿ ಮತ್ತು ಗುಜರಾತಿ ಭಾಷೆಗಳಿಗೆ ತರ್ಜುಮೆಗೊಂಡಿವೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮನೋವೈದ್ಯ ಜರ್ನಲ್‌ಗಳಲ್ಲಿ ಅವರ ೭೦ಕ್ಕೂ ಹೆಚ್ಚಿನ ಸಂಖ್ಯೆಯ ವೈಜ್ಞಾನಿಕ ಪ್ರಬಂಧಗಳು ಪ್ರಕಟಗೊಂಡಿವೆ. ಮಾತುಗಾರಿಕೆಯಲ್ಲೂ ಕೌಶಲ್ಯ ಸಾಧಿಸಿರುವ ಅವರನ್ನು ವರ್ಷದ ೩೬೫ ದಿನಗಳಲ್ಲಿ ಕೊನೆಯ ಪಕ್ಷ ೧೦೦ ದಿನಗಳಿಗಾದರೂ ಉಪನ್ಯಾಸ, ಭಾಷಣಗಳನ್ನು ನೀಡಲು ಹಾಗೂ ಸಂವಾದ ಕಾರ್ಯಕ್ರಮಗಳಲ್ಲಿ, ರೇಡಿಯೋ-ಟಿವಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಗಿರುತ್ತದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಡಾ. ಕೆ. ಶಿವರಾಮ ಕಾರಂತ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಡಾ. ಅನುಪಮಾ ನಿರಂಜನ ಪ್ರಶಸ್ತಿ, ರಸಋಷಿ ಕುವೆಂಪು ಪ್ರಶಸ್ತಿ - ಇವು ಡಾ. ಸಿಆರ್‌ಸಿ ಪಡೆದಿರುವ ಅನೇಕ ಪ್ರಶಸ್ತಿ ಪುರಸ್ಕಾರಗಳಲ್ಲಿ ಕೆಲವು. ಡಾ. ಸಿ.ಆರ್. ಚಂದ್ರಶೇಖರ್ ಅವರು ವಿಶ್ವ ಆರೋಗ್ಯ ಸಂಸ್ಥೆಯ ಮನೋವೈದ್ಯ ವಿಭಾಗದಲ್ಲಿ ತಜ್ಞ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವಂತೆಯೇ ಅನೇಕ ವೈದ್ಯ ಸಂಸ್ಥೆಗಳಿಗೆ, ಸಾಹಿತ್ಯ ಸಂಘಗಳಿಗೆ ಹಾಗೂ ಪತ್ರಿಕೆಗಳಿಗೆ ಸಲಹೆಗಾರರಾಗಿದ್ದಾರೆ.