ಸಾರಾಂಶ

ಅಪಘಾತದಿಂದಲೋ ಅನಿರೀಕ್ಷಿತ ಆರೋಗ್ಯ ಕುಸಿತದಿಂದಲೋ ಸಂಕಷ್ಟಕ್ಕೆ ಈಡಾದವರಿಗೆ ಪ್ರಥಮ ಚಿಕಿತ್ಸೆ ಒದಗಿಸುವುದೆಂದರೆ ಅದು ಆಂಬ್ಯುಲೆನ್ಸ್ ಸೇವೆಯಂತೆಯೆ ಒಂದು ದಿವ್ಯವಾದ ಸೇವಾಕಾರ್ಯವಾಗಿದೆ. ಪ್ರಥಮ ಚಿಕಿತ್ಸೆ ನೀಡುವ ವಿಧಾನವನ್ನು ಎಲ್ಲರೂ ತಿಳಿದಿದ್ದರೆ ಅದೆಷ್ಟೋ ಜೀವಗಳು ಉಳಿದಾವು; ಅದೆಷ್ಟೋ ಜನರು ಶಾಶ್ವತ ಅಂಗಹೀನತೆಗೆ ಜಾರುವುದು ತಪ್ಪೀತು.
ಹೆಸರಾಂತ ಮನೋವೈದ್ಯರೂ ಉಪನ್ಯಾಸಕರೂ ಹಿರಿಯ ಬರಹಗಾರರೂ ಆಗಿರುವ ಡಾ. ಸಿ.ಆರ್. ಚಂದ್ರಶೇಖರ್ ಅವರು ಈ ಕೃತಿಯಲ್ಲಿ ಪ್ರಾಣರಕ್ಷಕ ಪ್ರಥಮ ಚಿಕಿತ್ಸಾ ವಿಧಾನಗಳನ್ನು ಸವಿವರವಾಗಿ ತಿಳಿಸಿಕೊಟ್ಟಿದ್ದಾರೆ. ಅಲ್ಲದೆ, ಸಾಮಾನ್ಯ ರೋಗಗಳು ಉಂಟಾಗಲು ಇರುವ ಕಾರಣಗಳು ಹಾಗೂ ಅವುಗಳ ನಿವಾರಣೆ ಕುರಿತೂ ಅವರು ತಮ್ಮ ಎಂದಿನ ಸುಂದರವೂ ಸುಲಭಗ್ರಾಹ್ಯವೂ
ಆದ ಕನ್ನಡದಲ್ಲಿ ವಿವರಿಸಿದ್ದಾರೆ. ಸಾಮಾನ್ಯ ರೋಗ ಲಕ್ಷಣ, ಗಾಯಗಳು, ರಕ್ತಸ್ರಾವ, ಮೂಳೆಗಳ ಮುರಿತ, ಕೀಟ ಹಾಗೂ ಪ್ರಾಣಿಗಳ ಕಡಿತ, ಆಘಾತ, ಕೃತಕ ಉಸಿರಾಟ, ಭಾವೋದ್ವೇಗ - ಹೀಗೆ ಕೃತಿಯಲ್ಲಿರುವ ವಿಷಯಪಟ್ಟಿ ದೊಡ್ಡದು.

ಪ್ರಥಮ ಚಿಕಿತ್ಸೆ
ಲೇಖಕರು:
ಡಾ ಸಿ ಆರ್ ಚಂದ್ರಶೇಖರ್
ಪ್ರಕಾರ:
ಇತರೆ
ಪ್ರಕಾಶಕರು:
ವಸಂತ ಪ್ರಕಾಶನ
ಆಕಾರ:
1/8 ಡೆಮಿ
ಮುದ್ರಣ:
2017
ರಕ್ಷಾಪುಟ:
ಅರುಣ್
ಪುಟಗಳು:
120
ಬೆಲೆ:
90 ರೂ.
ಲೇಖಕರ ಪರಿಚಯ
ಡಾ. ಸಿ.ಆರ್. ಚಂದ್ರಶೇಖರ್ ಅವರು ಸುಪ್ರಸಿದ್ಧ ಮನೋವೈದ್ಯರಾಗಿರುವಂತೆಯೇ ಮಾನಸಿಕ ಸ್ವಾಸ್ಥ್ಯ ಕುರಿತಂತೆ ಕನ್ನಡದಲ್ಲಿ ಬರೆಯುತ್ತಿರುವ ಅಗ್ರಗಣ್ಯ ಲೇಖಕರೊಲ್ಲಬ್ಬರು. ೧೯೪೮ರ ಡಿಸೆಂಬರ್ ೧೨ರಂದು ಚನ್ನಪಟ್ಟಣದ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಜನಿಸಿದ ಅವರು ಎಂಬಿಬಿಎಸ್, ಎಂಡಿ, ಡಿಪಿಎಂ ಪದವೀಧರರು. ವಿಖ್ಯಾತ ನಿಮ್ಹಾನ್ಸ್ ಆಸ್ಪತ್ರೆಯ ಮನೋವೈದ್ಯ ವಿಭಾಗದಲ್ಲಿ ವೈದ್ಯರಾಗಿಯೂ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿ ನಿವೃತ್ತರಾದ ನಂತರ, ಪ್ರಸ್ತುತ ಬನ್ನೇರುಘಟ್ಟ ರಸ್ತೆಯಲ್ಲಿರುವ ’ಸಮಾಧಾನ ಕೇಂದ್ರ’ದಲ್ಲಿ ಮನೋರೋಗಿಗಳಿಗೆ ಉಚಿತ ಸಲಹೆ, ಚಿಕಿತ್ಸೆ ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ೪೦ಕ್ಕೂ ಹೆಚ್ಚು ವರ್ಷಗಳ ಕಾಲ ಮನೋವೈದ್ಯರಾಗಿ ಸೇವೆ ಸಲ್ಲಿಸಿರುವ ಡಾ. ಸಿಆರ್‌ಸಿ ವೈದ್ಯಕೀಯ ವಿಷಯಗಳ ಲೇಖಕರಾಗಿಯೂ ಅದ್ವಿತೀಯ ಕೆಲಸ ಮಾಡಿದ್ದಾರೆ. ಪತ್ರಿಕೆಗಳಲ್ಲಿ ೧೦೦೦ಕ್ಕೂ ಹೆಚ್ಚು ಲೇಖನಗಳು, ೨೦೦ಕ್ಕೂ ಹೆಚ್ಚು ಆರೋಗ್ಯದ ಬಗ್ಗೆ ಕನ್ನಡದಲ್ಲಿ ಪುಸ್ತಕಗಳು, ೨೨ ಇಂಗ್ಲಿಷ್ ಪುಸ್ತಕಗಳು ಅವರ ಲೇಖನಿಯಿಂದ ಮೂಡಿಬಂದಿವೆ. ೧೨೦ಕ್ಕೂ ಹೆಚ್ಚಿನ ವೈದ್ಯಕೀಯ ಕೃತಿಗಳನ್ನು ಸಂಪಾದಿಸಿರುವ ಅವರ ಕೆಲವು ಪುಸ್ತಕಗಳು ತೆಲುಗು, ಉರ್ದು, ಹಿಂದಿ ಮತ್ತು ಗುಜರಾತಿ ಭಾಷೆಗಳಿಗೆ ತರ್ಜುಮೆಗೊಂಡಿವೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮನೋವೈದ್ಯ ಜರ್ನಲ್‌ಗಳಲ್ಲಿ ಅವರ ೭೦ಕ್ಕೂ ಹೆಚ್ಚಿನ ಸಂಖ್ಯೆಯ ವೈಜ್ಞಾನಿಕ ಪ್ರಬಂಧಗಳು ಪ್ರಕಟಗೊಂಡಿವೆ. ಮಾತುಗಾರಿಕೆಯಲ್ಲೂ ಕೌಶಲ್ಯ ಸಾಧಿಸಿರುವ ಅವರನ್ನು ವರ್ಷದ ೩೬೫ ದಿನಗಳಲ್ಲಿ ಕೊನೆಯ ಪಕ್ಷ ೧೦೦ ದಿನಗಳಿಗಾದರೂ ಉಪನ್ಯಾಸ, ಭಾಷಣಗಳನ್ನು ನೀಡಲು ಹಾಗೂ ಸಂವಾದ ಕಾರ್ಯಕ್ರಮಗಳಲ್ಲಿ, ರೇಡಿಯೋ-ಟಿವಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಗಿರುತ್ತದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಡಾ. ಕೆ. ಶಿವರಾಮ ಕಾರಂತ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಡಾ. ಅನುಪಮಾ ನಿರಂಜನ ಪ್ರಶಸ್ತಿ, ರಸಋಷಿ ಕುವೆಂಪು ಪ್ರಶಸ್ತಿ - ಇವು ಡಾ. ಸಿಆರ್‌ಸಿ ಪಡೆದಿರುವ ಅನೇಕ ಪ್ರಶಸ್ತಿ ಪುರಸ್ಕಾರಗಳಲ್ಲಿ ಕೆಲವು. ಡಾ. ಸಿ.ಆರ್. ಚಂದ್ರಶೇಖರ್ ಅವರು ವಿಶ್ವ ಆರೋಗ್ಯ ಸಂಸ್ಥೆಯ ಮನೋವೈದ್ಯ ವಿಭಾಗದಲ್ಲಿ ತಜ್ಞ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವಂತೆಯೇ ಅನೇಕ ವೈದ್ಯ ಸಂಸ್ಥೆಗಳಿಗೆ, ಸಾಹಿತ್ಯ ಸಂಘಗಳಿಗೆ ಹಾಗೂ ಪತ್ರಿಕೆಗಳಿಗೆ ಸಲಹೆಗಾರರಾಗಿದ್ದಾರೆ.