ಸಾರಾಂಶ

ನಮ್ಮ ದೇಶವನ್ನು ದೊಡ್ಡ ಮಟ್ಟದಲ್ಲಿ ಪೀಡಿಸುವ ಪಿಡುಗುಗಳೆಂದರೆ ಅನಕ್ಷರತೆ, ಅಜ್ಞಾನ. ಇದರ ಪರಿಣಾಮದಿಂದ ಜನತೆ ಹಲವು ಬಗೆಯ ದೈಹಿಕ, ಮಾನಸಿಕ ರೋಗಗಳಿಗೆ ಬಹುಬೇಗ ಬಲಿಯಾಗುವುದು ಕಂಡುಬರುತ್ತದೆ. ಇತ್ತೀಚಿನ ದಿನಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಕೆಲವು ವಿಶೇಷ ಕಾಯಿಲೆಗಳ ಜೊತೆಗೆ ಸಾಮಾನ್ಯವಾಗಿ ಎಲ್ಲರಿಗೂ ಬರಬಹುದಾದ ಕೆಲವು ರೋಗಗಳು ಸಮುದಾಯಗಳನ್ನು ಕಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇವುಗಳನ್ನು ಸಂಪೂರ್ಣ ತೊಡೆದುಹಾಕಲು ಸಾಧ್ಯವಾಗದಿದ್ದರೂ ನಿಯಂತ್ರಣದಲ್ಲಿಟ್ಟುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಲು ನಮ್ಮ ಜೀವನವನ್ನು ಕೆಲವು ಬಗೆಯ ಶಿಸ್ತುಗಳಿಗೆ ಒಳಗುಮಾಡಿಕೊಳ್ಳಬೇಕಾಗುತ್ತದೆ. ಆಹಾರ, ವ್ಯಾಯಾಮ, ಮಾನಸಿಕ ಒತ್ತಡ ಇವುಗಳನ್ನು ಸರಿಯಾದ ಕ್ರಮದಲ್ಲಿ ಪರಿಪಾಲಿಸಿದರೆ ಇದು ಕಾಡುವ ಕಾಯಿಲೆಯಾಗದೇ ತಡೆಗಟ್ಟಬಹುದಾದ ಜೀವನ ವಿನ್ಯಾಸವಾಗುತ್ತದೆ. ಇದಕ್ಕೆ ಅಗತ್ಯವಾದ ತಿಳಿವಳಿಕೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವಂತಹ ಕಾರ್ಯವನ್ನು 'ಆರೋಗ್ಯ ಚಿಂತನ ಮಾಲಿಕೆ'ಯ ಕೃತಿಗಳು ಮಾಡುತ್ತವೆ. ಆಧುನಿಕ ಜೀವನದ ಸಂಕೀರ್ಣತೆಯಲ್ಲಿ ಪ್ರತಿ ವ್ಯಕ್ತಿಯು ಮಾನಸಿಕ ಒತ್ತಡಕ್ಕೆ ಬಲಿಯಾಗುತ್ತಾನೆ. ಸಮಸ್ಯೆಗಳು ತಲೆದೋರಿದಾಗ ಅದನ್ನು ನಿಭಾಯಿಸಲಾಗದೇ ಮತ್ತಷ್ಟು ತೊಂದರೆಗಳಿಗೆ ಸಿಲುಕಿಕೊಳ್ಳುವುದು ಸಾಮಾನ್ಯ. ಇದರಿಂದ ಮನೋದೈಹಿಕ ತೊಂದರೆಗಳಿಗೆ ಸಿಲುಕಿ ಹೇಗೆ ಕಾಯಿಲೆಗಳಿಂದ ನರಳುತ್ತಾನೆಂಬುದನ್ನು ಮತ್ತು ಅದರಿಂದ ಪರಿಹಾರ ಹೊಂದುವ ಬಗೆಯನ್ನು 'ಟೆನ್ಷನ್ ತಗ್ಗಿಸಿ, ಆರೋಗ್ಯ ವೃದ್ಧಿಸಿ' ಕೃತಿಯಲ್ಲಿ ಮನೋಜ್ಞವಾಗಿ ವಿವರಿಸಲಾಗಿದೆ. ಈ ಕೃತಿಯಲ್ಲಿ ಪುರಂದರದಾಸರ ಪದ್ಯಗಳು, ಡಿ.ವಿ.ಜಿ.ಯವರ ಕಗ್ಗದ ಪದ್ಯಗಳನ್ನು ಸಮೃದ್ಧವಾಗಿ ಬಳಸಿಕೊಂಡಿರುವುದು ಹೆಚ್ಚು ಅರ್ಥವಂತಿಕೆಯಿಂದ ಕೂಡಿದೆ. ಮಾನಸಿಕ ಒತ್ತಡವನ್ನು ನಿಭಾಯಿಸುವ ವಿಧಾನವನ್ನು ಸರಳವಾಗಿ ವೈದ್ಯ ಸಾಹಿತ್ಯದ ದಿಗ್ಗಜರಾದ, ನೂರಕ್ಕೂ ಹೆಚ್ಚು ಕೃತಿಗಳನ್ನು ಬರೆದಿರುವ ಪ್ರಸಿದ್ಧ ಮನೋವೈದ್ಯ ಹಾಗೂ ರಾಷ್ಟ್ರೀಯ ವಿಜ್ಞಾನ ಪ್ರಶಸ್ತಿ ಪುರಸ್ಕೃತರಾದ ಡಾ. ಸಿ.ಆರ್. ಚಂದ್ರಶೇಖರ್‌ರವರು 'ಟೆನ್ಷನ್ ತಗ್ಗಿಸಿ, ಆರೋಗ್ಯ ವೃದ್ಧಿಸಿ' ಕೃತಿಯಲ್ಲಿ ಮನಮುಟ್ಟುವಂತೆ ತಿಳಿಸಿದ್ದಾರೆ.

ಟೆನ್ಷನ್ ತಗ್ಗಿಸಿ ಆರೋಗ್ಯ ವೃದ್ಧಿಸಿ
ಲೇಖಕರು:
ಡಾ ಸಿ ಆರ್ ಚಂದ್ರಶೇಖರ್
ಪ್ರಕಾರ:
ಕಥೆ
ಪ್ರಕಾಶಕರು:
ವಸಂತ ಪ್ರಕಾಶನ
ಆಕಾರ:
1/6 ಡೆಮಿ
ಮುದ್ರಣ:
2016
ರಕ್ಷಾಪುಟ:
ಅರುಣ್
ಪುಟಗಳು:
134
ಬೆಲೆ:
100 ರೂ.
ಲೇಖಕರ ಪರಿಚಯ
ಡಾ. ಸಿ.ಆರ್. ಚಂದ್ರಶೇಖರ್ ಅವರು ಸುಪ್ರಸಿದ್ಧ ಮನೋವೈದ್ಯರಾಗಿರುವಂತೆಯೇ ಮಾನಸಿಕ ಸ್ವಾಸ್ಥ್ಯ ಕುರಿತಂತೆ ಕನ್ನಡದಲ್ಲಿ ಬರೆಯುತ್ತಿರುವ ಅಗ್ರಗಣ್ಯ ಲೇಖಕರೊಲ್ಲಬ್ಬರು. ೧೯೪೮ರ ಡಿಸೆಂಬರ್ ೧೨ರಂದು ಚನ್ನಪಟ್ಟಣದ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಜನಿಸಿದ ಅವರು ಎಂಬಿಬಿಎಸ್, ಎಂಡಿ, ಡಿಪಿಎಂ ಪದವೀಧರರು. ವಿಖ್ಯಾತ ನಿಮ್ಹಾನ್ಸ್ ಆಸ್ಪತ್ರೆಯ ಮನೋವೈದ್ಯ ವಿಭಾಗದಲ್ಲಿ ವೈದ್ಯರಾಗಿಯೂ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿ ನಿವೃತ್ತರಾದ ನಂತರ, ಪ್ರಸ್ತುತ ಬನ್ನೇರುಘಟ್ಟ ರಸ್ತೆಯಲ್ಲಿರುವ ’ಸಮಾಧಾನ ಕೇಂದ್ರ’ದಲ್ಲಿ ಮನೋರೋಗಿಗಳಿಗೆ ಉಚಿತ ಸಲಹೆ, ಚಿಕಿತ್ಸೆ ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ೪೦ಕ್ಕೂ ಹೆಚ್ಚು ವರ್ಷಗಳ ಕಾಲ ಮನೋವೈದ್ಯರಾಗಿ ಸೇವೆ ಸಲ್ಲಿಸಿರುವ ಡಾ. ಸಿಆರ್‌ಸಿ ವೈದ್ಯಕೀಯ ವಿಷಯಗಳ ಲೇಖಕರಾಗಿಯೂ ಅದ್ವಿತೀಯ ಕೆಲಸ ಮಾಡಿದ್ದಾರೆ. ಪತ್ರಿಕೆಗಳಲ್ಲಿ ೧೦೦೦ಕ್ಕೂ ಹೆಚ್ಚು ಲೇಖನಗಳು, ೨೦೦ಕ್ಕೂ ಹೆಚ್ಚು ಆರೋಗ್ಯದ ಬಗ್ಗೆ ಕನ್ನಡದಲ್ಲಿ ಪುಸ್ತಕಗಳು, ೨೨ ಇಂಗ್ಲಿಷ್ ಪುಸ್ತಕಗಳು ಅವರ ಲೇಖನಿಯಿಂದ ಮೂಡಿಬಂದಿವೆ. ೧೨೦ಕ್ಕೂ ಹೆಚ್ಚಿನ ವೈದ್ಯಕೀಯ ಕೃತಿಗಳನ್ನು ಸಂಪಾದಿಸಿರುವ ಅವರ ಕೆಲವು ಪುಸ್ತಕಗಳು ತೆಲುಗು, ಉರ್ದು, ಹಿಂದಿ ಮತ್ತು ಗುಜರಾತಿ ಭಾಷೆಗಳಿಗೆ ತರ್ಜುಮೆಗೊಂಡಿವೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮನೋವೈದ್ಯ ಜರ್ನಲ್‌ಗಳಲ್ಲಿ ಅವರ ೭೦ಕ್ಕೂ ಹೆಚ್ಚಿನ ಸಂಖ್ಯೆಯ ವೈಜ್ಞಾನಿಕ ಪ್ರಬಂಧಗಳು ಪ್ರಕಟಗೊಂಡಿವೆ. ಮಾತುಗಾರಿಕೆಯಲ್ಲೂ ಕೌಶಲ್ಯ ಸಾಧಿಸಿರುವ ಅವರನ್ನು ವರ್ಷದ ೩೬೫ ದಿನಗಳಲ್ಲಿ ಕೊನೆಯ ಪಕ್ಷ ೧೦೦ ದಿನಗಳಿಗಾದರೂ ಉಪನ್ಯಾಸ, ಭಾಷಣಗಳನ್ನು ನೀಡಲು ಹಾಗೂ ಸಂವಾದ ಕಾರ್ಯಕ್ರಮಗಳಲ್ಲಿ, ರೇಡಿಯೋ-ಟಿವಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಗಿರುತ್ತದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಡಾ. ಕೆ. ಶಿವರಾಮ ಕಾರಂತ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಡಾ. ಅನುಪಮಾ ನಿರಂಜನ ಪ್ರಶಸ್ತಿ, ರಸಋಷಿ ಕುವೆಂಪು ಪ್ರಶಸ್ತಿ - ಇವು ಡಾ. ಸಿಆರ್‌ಸಿ ಪಡೆದಿರುವ ಅನೇಕ ಪ್ರಶಸ್ತಿ ಪುರಸ್ಕಾರಗಳಲ್ಲಿ ಕೆಲವು. ಡಾ. ಸಿ.ಆರ್. ಚಂದ್ರಶೇಖರ್ ಅವರು ವಿಶ್ವ ಆರೋಗ್ಯ ಸಂಸ್ಥೆಯ ಮನೋವೈದ್ಯ ವಿಭಾಗದಲ್ಲಿ ತಜ್ಞ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವಂತೆಯೇ ಅನೇಕ ವೈದ್ಯ ಸಂಸ್ಥೆಗಳಿಗೆ, ಸಾಹಿತ್ಯ ಸಂಘಗಳಿಗೆ ಹಾಗೂ ಪತ್ರಿಕೆಗಳಿಗೆ ಸಲಹೆಗಾರರಾಗಿದ್ದಾರೆ.