ಸಾರಾಂಶ

ಕಾಲ ಅದೆಷ್ಟೇ ಸವೆದರೂ ಅದೆಷ್ಟೋ ಅನರ್ಘ್ಯ ಸಾಹಿತ್ಯ ಕೃತಿಗಳು ತಮ್ಮ ಮೆರಗನ್ನ ಕಿಂಚಿತ್ತೂ ಕಳೆದುಕೊಳ್ಳುವುದಿಲ್ಲ. ಎಲ್ಲ ಕಾಲಕ್ಕೆ ಸಲ್ಲುವ ಈ ಕ್ಲಾಸಿಕ್ಗಳನ್ನು ಓದುವ, ಆಗಾಗ ಮೆಲಕು ಹಾಕುವ ಓದುಗರದೇ ಒಂದು ಪ್ರತ್ಯೇಕ ಪುಣ್ಯ. ವಸಂತ ಪ್ರಕಾಶನವು ಈ ದಿಸೆಯಲ್ಲಿ 'ಮಕ್ಕಳಿಗಾಗಿ ಲೋಕವಿಖ್ಯಾತರ ಕೃತಿಗಳು' ಎಂಬ ಮಾಲೆಯನ್ನು ಆರಂಭಿಸಿದ್ದು ಮೊದಲಿಗೆ 'ಟ್ರೆಶರ್ ಐಲ್ಯಾಂಡ್', 'ಅರೌಂಡ್ ದ ವರ್ಲ್ಡ್ ಇನ್ ೮೦ ಡೇಸ್', 'ಡಾನ್ ಕ್ವಿಕ್ಸಾಟ್' ಮತ್ತು 'ಅಲೈಸ್ ಇನ್ ವಂಡರ್ಲ್ಯಾಂಡ್' ಕೃತಿಗಳನ್ನು ಪ್ರಸ್ತುತ ಪಡಿಸುತ್ತಿದೆ. ಕನ್ನಡದ ಹಿರಿಯ ಲೇಖಕರೂ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ವೈವಿಧ್ಯಮಯ ಕೃಷಿ ಮಾಡಿರುವವರೂ ಆದ ಎಂ.ವಿ. ನಾಗರಾಜರಾವ್ ಅವರು ಈ ಕೃತಿಗಳ ಸಂಕ್ಷಿಪ್ತ ರೂಪವನ್ನು ಕ್ರಮವಾಗಿ 'ಗುಪ್ತನಿಧಿ', '೮೦ ದಿನಗಳಲ್ಲಿ ವಿಶ್ವಪರ್ಯಟನೆ', 'ಯುದ್ಧವೀರನ ಹಾಸ್ಯ ಪ್ರಸಂಗಗಳು' ಮತ್ತು 'ಜಾದೂನಗರ' ಎಂಬ ಹೆಸರುಗಳಲ್ಲಿ ಸುಭಗವಾಗಿ ಕನ್ನಡಕ್ಕೆ ತಂದುಕೊಟ್ಟಿದ್ದಾರೆ. ಅವರಿಗೆ ನಮ್ಮ ಧನ್ಯವಾದಗಳು. ಇಂತಹ ಅನೇಕ ಮನೋಜ್ಞ ಕೃತಿಗಳನ್ನು ಬಹು ಶೀಘ್ರದಲ್ಲಿ ಹೊರತರುವ ಕಾರ್ಯಗಳು ನಡೆಯುತ್ತಿವೆ.

ಯುದ್ಧವೀರ ಹಾಸ್ಯ ಪ್ರಸಂಗಗಳು
ಲೇಖಕರು:
ಮಿಗಲ್ ಡಿ ಸಾರ್ವಾಂಟಶ್ ಸಾವೇದ್ರಾ
ಅನುವಾದಕರು :
ಎಂ ವಿ ನಾಗರಾಜರಾವ್
ಪ್ರಕಾರ:
ಬಾಲ ಸಾಹಿತ್ಯ
ಪ್ರಕಾಶಕರು:
ವಸಂತ ಪ್ರಕಾಶನ
ಆಕಾರ:
1/8 ಕ್ರೌನ್
ಮುದ್ರಣ:
2015
ರಕ್ಷಾಪುಟ:
ಎಡಿಟ್ ಇನ್ ಇಂಟರ್ ನ್ಯಾಷನಲ್ಸ್
ಪುಟಗಳು:
88
ಬೆಲೆ:
45 ರೂ.
ಲೇಖಕರ ಪರಿಚಯ
ಲೇಖಕರ ಪರಿಚಯ : ಕನ್ನಡದ ಹಿರಿಯ ಸಾಹಿತಿಗಳೂ ಪ್ರಕಾಶಕರೂ ಮಕ್ಕಳ ಸಾಹಿತ್ಯ ಲೋಕಕ್ಕೆ ವಿಶೇಷ ಕೊಡುಗೆಗಳನ್ನು ನೀಡಿರುವವರೂ ಆದ ನಿವೃತ್ತ ಪ್ರಾಚಾರ್ಯ ಎಂ.ವಿ. ನಾಗರಾಜರಾವ್ ಅವರು ಹುಟ್ಟಿದ್ದು ೧೯೪೧ರಲ್ಲಿ, ಚಿಕ್ಕನಾಯಕನಹಳ್ಳಿಯಲ್ಲಿ. ತಂದೆ ಎಂ.ಆರ್. ವೆಂಕಟರಾಮಯ್ಯ; ತಾಯಿ ಟಿ.ಆರ್. ಸಂಜೀವಮ್ಮ. ರಾಯರು ಎಂ.ಎ. (ಕನ್ನಡ), ಎಂ.ಎ. (ಹಿಂದಿ), ಬಿ.ಇಡಿ ಪದವೀಧರರು. ಅಲ್ಲದೆ ಸಾಹಿತ್ಯ ರತ್ನ, ರಾಷ್ಟ್ರಭಾಷಾ ವಿಶಾರದ, ರಾಷ್ಟ್ರಭಾಷಾ ಪ್ರವೀಣ, ರಾಜಭಾಷಾ ವಿದ್ವಾನ್, ಹಿಂದಿ ರತ್ನ, ಹಿಂದಿ ಭಾಷಾ ಪ್ರವೀಣ ವಿದ್ಯಾರ್ಹತೆಗಳನ್ನು ಪಡೆದವರು. ರಾಯರದು ಭಾಷಾಂತರವೂ ಸೇರಿದಂತೆ ಗುಣಮಟ್ಟದ ವಿಪುಲ ಸಾಹಿತ್ಯ ರಚನೆ. ಅವರ ಐವತ್ತೆರಡಕ್ಕೂ ಹೆಚ್ಚು ಕಾದಂಬರಿಗಳು ಪ್ರಕಟವಾಗಿವೆ. ಇವುಗಳಲ್ಲಿ ಕೆಲವೆಂದರೆ: ಕಂಪನ, ಅಘೋರಿಗಳ ನಡುವೆ, ನಲ್ಲ ಅಪರಾಧಿ ನಾನಲ್ಲ, ವಿಶ್ವಬಾಹು ಪರಶುರಾಮ, ಜೇಮ್ಸ್ ಹ್ಯಾಡ್ಲಿ ಚೇಸ್‌ನನ್ನು ಅನುವಾದಿಸಿ ತಂದ ನೆಲವೆಲ್ಲಾ ಕಿವಿ, ಮೃತ್ಯುಬಂಧನ, ರಕ್ತದೋಕುಳಿ, ಹಿಂದಿಯಿಂದ ಕನ್ನಡಕ್ಕೆ ತಂದ ಡಾ. ನರೇಂದ್ರ ಕೊಹಿಲಿಯವರ ರಾಮಾಯಣ ಆಧಾರಿತ ಏಳು ಕಾದಂಬರಿಗಳೂ ಸೇರಿವೆ. ಮಕ್ಕಳ ಸಾಹಿತ್ಯ ಲೋಕದಲ್ಲಂತೂ ರಾಯರ ಸೇವೆ ವಿಶಿಷ್ಟ ಬಗೆಯದು: ವಿಜ್ಞಾನದ ಅದ್ಭುತಗಳು, ಸೊಹ್ರಾಬ್ ಮತ್ತು ರುಸ್ತುಂ, ಕ್ರೀಡೆಗಳು, ಸಿಕ್ಕಿಂ ಕಥೆಗಳು, ಬರ್ಮಾದ ಕಥೆಗಳು, ದೇಶ-ವಿದೇಶಗಳ ಮಕ್ಕಳ ಕಥೆಗಳು, ವಿಶ್ವವಿಖ್ಯಾತ ಲೇಖಕರ ಕೃತಿಗಳು, ರಾಮಾಯಣ ಕ್ವಿಜ್, ಮಹಾಭಾರತ ನಿಮಗೆಷ್ಟು ಗೊತ್ತು?, ಐತಿಹಾಸಿಕ ಏಕಾಂಕ ನಾಟಕಗಳು, ೧೦೦ ಕಥೆ ನೂರಾರು ನೀತಿ, ಕನ್ನಡ ವ್ಯಾಕರಣ ದರ್ಪಣ, ತತ್ಸಮ-ತದ್ಭವ ಕೋಶ, ವಿದ್ಯಾರ್ಥಿ ಮಿತ್ರ ಮೊದಲಾದ ಬಹು ಸಂಖ್ಯೆಯ ಕೃತಿಗಳು. ಇತ್ತೀಚೆಗೆ ವಸಂತ ಪ್ರಕಾಶನವು ಪ್ರಾರಂಭಿಸಿರುವ ಜಗದ್ವಿಖ್ಯಾತ ಕೃತಿಗಳ ಸಂಕ್ಷಿಪ್ತ ರೂಪವನ್ನು ಮಕ್ಕಳಿಗಾಗಿ ಕನ್ನಡದಲ್ಲಿ ತಂದುಕೊಡುವ ‘ಮಕ್ಕಳಿಗಾಗಿ ಲೋಕವಿಖ್ಯಾತ ಕೃತಿಗಳು’ ಮಾಲೆಯಡಿ ಜೂಲ್ಸ್‌ವರ್ನ್‌ನ ‘೮೦ ದಿನಗಳಲ್ಲಿ ವಿಶ್ವಪರ್ಯಟನೆ’, ಲಿವೀಸ್ ಕೆರಾಲ್‌ನ ‘ಜಾದೂ ನಗರ’, ಸರ್ವಾಂಟಶ್ ಸಾವೇದ್ರಾನ ‘ಯುದ್ಧವೀರನ ಹಾಸ್ಯಪ್ರಸಂಗಗಳು’ ಮತ್ತು ರಾಬರ್ಟ್ ಲೂಯಿಸ್ ಸ್ಟೀವನ್‌ಸನ್‌ನ ‘ಗುಪ್ತನಿಧಿ’ ಕೃತಿಗಳು ಪ್ರಕಟಗೊಂಡಿವೆ. ಅನೇಕ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿರುವ ರಾಯರು ಐದು ಬಾರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿ ಸೇವೆ ಸಲ್ಲಿಸಿದ್ದಾರೆ. ಅಂತಾರಾಷ್ಟ್ರೀಯ ರೋಟರಿ ಸೇವಾ ಸಂಸ್ಥೆಯ ಮುಖಾಂತರ ರಕ್ತದಾನ ಶಿಬಿರ, ನೇತ್ರ ಪರೀಕ್ಷೆ ಮೊದಲಾದ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಯಶಸ್ವಿಯಾಗಿ ತೊಡಗಿ ಕೊಳ್ಳುವುದು ಅವರ ಹವ್ಯಾಸದಂತೆಯೇ ಆಗಿದೆ. ಇದಲ್ಲದೆ ಇನ್ನೂ ಅನೇಕ ಸಂಘ-ಸಂಸ್ಥೆಗಳಲ್ಲಿ ಒಡನಾಟವನ್ನಿಟ್ಟುಕೊಂಡಿದ್ದಾರೆ. ಹಾಸನದಲ್ಲಿ ನಡೆದ ೬೭ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿತರಾಗಿರುವ ನಾಗರಾಜ್‌ರಾವ್ ಅವರು ಅಮೆರಿಕದ ಮಿಲ್ಟಿಟಾಸ್ ಕನ್ನಡ ಸಂಘವೂ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳಿಂದಲೂ ಗೌರವಾದರಗಳನ್ನು ಪಡೆದಿದ್ದಾರೆ; ಚಿಕ್ಕನಾಯಕನಹಳ್ಳಿ ತಾಲ್ಲೂಕು ೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠವನ್ನೂ ಅಲಂಕರಿಸಿದ್ದಾರೆ; ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದಾರೆ.