ಸಾರಾಂಶ

ಎ.ಆರ್.ಕೃ. ಅವರು ಕಳೆದ ಶತಮಾನದಲ್ಲಿ ಕನ್ನಡನಾಡು ಕಂಡ ಅಸಾಧಾರಣ ವಿದ್ವಾಂಸರಲ್ಲಿ ಒಬ್ಬರು. ಅವರು ಒಂದು ಭಾಷಣದಲ್ಲಿ, ನನಗೆ ಸಂಸ್ಕೃತದಲ್ಲಿಯೂ ಪ್ರವೇಶವಿದೆ; ಕನ್ನಡಕ್ಕಿಂತ ಅದರಲ್ಲಿ ಹೆಚ್ಚು ಪ್ರವೇಶವಿದೆ ಎಂದರು. ಅವರ ವಿದ್ವತ್ತು ಅವರ ಪ್ರಜ್ಞೆಯ ಹಾಲಿನಲ್ಲಿ ಕರಗಿಹೋದ ಸಕ್ಕರೆ: 'ವಚನ ಭಾರತ'ದ ಮುನ್ನುಡಿ, 'ಅತ್ತಿಗೆ' ಮೊದಲಾಗಿ ಶಬ್ದಗಳ ವ್ಯುತ್ಪತ್ತಿ, ಅರ್ಥಗಳ ಚರ್ಚೆ, 'ಹರಿಶ್ಚಂದ್ರ ಕಾವ್ಯ'ಕ್ಕೆ ಅವರು ಬರೆದ ಪೀಠಿಕೆ, ಇವುಗಳಲ್ಲಿ ಒಂದೊಂದೂ ಅವರ ವಿದ್ವತ್ತಿಗೆ ಕನ್ನಡಿ. ವಿದ್ವತ್ಪೂರ್ಣವಾದ ಸಾಮಗ್ರಿಯನ್ನು ಸ್ಪಷ್ಟವಾಗಿ, ಸಂಗ್ರಹವಾಗಿ ನಿರೂಪಿಸುವ ಅವರ ಸಾಮರ್ಥ್ಯವೂ ವಿರಳವಾದುದು. 'ತತ್ವಶಾಸ್ತ್ರ ಮತ್ತು ಅದರ ಸಮಸ್ಯೆಗಳು' ಇದಕ್ಕೆ ಒಂದು ಉತ್ತಮವಾದ ಉದಾಹರಣೆ. ಓದಿದ್ದು ರಕ್ತಗತವಾದವರು ಮಾತ್ರ 'ವಚನ ಭಾರತ'ದ ಮುನ್ನುಡಿಯನ್ನು, ಅದರಲ್ಲಿ 'ಮಹಾಭಾರತದ ದರ್ಶನ'ದಂತಹ ಭಾಗಗಳನ್ನು ಬರೆಯಲು ಸಾಧ್ಯ... ಶಾಸ್ತ್ರಿಗಳದು ಕ್ರಿಯಾಶೀಲ ಕನ್ನಡ ಅಭಿಮಾನ. ಕನ್ನಡ ನಾಡಿನಲ್ಲಿ ಕನ್ನಡದ ಸ್ಥಾನದ ಸ್ಪಷ್ಟ ಕಲ್ಪನೆ ಅವರಿಗಿತ್ತು. ಕನ್ನಡಕ್ಕೆ ಅನ್ಯಾಯವಾದಾಗಲೆಲ್ಲ ಜನರನ್ನು ಎಚ್ಚರಿಸಿದರು, ಪ್ರತಿಭಟಿಸಿದರು.

ಎ.ಆರ್. ಕೃಷ್ಣಶಾಸ್ತ್ರೀ ಅವರ ಬೆಲೆ ಬಾಳುವ ಬರಹಗಳು
ಲೇಖಕರು:
ಪ್ರೊ ಎಲ್ ಎಸ್ ಶೇಷಗಿರಿ ರಾವ್
ಪ್ರಕಾರ:
ಇತರೆ
ಪ್ರಕಾಶಕರು:
ವಸಂತ ಪ್ರಕಾಶನ
ಆಕಾರ:
1/8 ಡೆಮಿ
ಮುದ್ರಣ:
2013
ರಕ್ಷಾಪುಟ:
ಚೆನ್ನಕೇಶವ
ಪುಟಗಳು:
300
ಬೆಲೆ:
180 ರೂ.
ಲೇಖಕರ ಪರಿಚಯ
ಪ್ರೊ ಎಲ್.ಎಸ್. ಶೇಷಗಿರಿ ರಾವ್ ಅವರು ಹುಟ್ಟಿದ್ದು ೧೯೨೫ರಲ್ಲಿ, ಬೆಂಗಳೂರಿನಲ್ಲಿ. ಇಂಗ್ಲಿಷ್ ಭಾಷೆ, ಸಾಹಿತ್ಯಗಳಲ್ಲಿ ಬಂಗಾರದ ಪದಕಗಳೊಡನೆ ಎಂ.ಎ. ಪದವಿ ಪಡೆದ ಅವರು ಹಲವು ಸರ್ಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಇಂಗ್ಲಿಷ್ ವಿಭಾಗದಿಂದ ನಿವೃತ್ತರಾದರು. ನಂತರ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು. ಕನ್ನಡ ಪುಸ್ತಕ ಪ್ರಾಧಿಕಾರದ ಮೊದಲನೆಯ ಅಧ್ಯಕ್ಷರು ಅವರು. ಹಲವು ದೇಶಗಳ ಸಾಹಿತ್ಯಗಳ ಅಧ್ಯಯನದ ಫಲವನ್ನು ಧಾರೆ ಎರೆದು ಕನ್ನಡ ಸಾಹಿತ್ಯ ವಿಮರ್ಶೆಗೆ ಹೊಸ ಚೈತನ್ಯ ತಂದುಕೊಡುವ ಮೂಲಕ ವಿಮರ್ಶಾ ಕ್ಷೇತ್ರದಲ್ಲಿ ಅಗ್ರಗಣ್ಯರೆನಿಸಿದ ರಾಯರು ಎಪ್ಪತ್ತೈದಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಸಣ್ಣಕತೆಗಳು, ವಿಮರ್ಶಾ ಕೃತಿಗಳು, ಸಾಹಿತ್ಯ ಚರಿತ್ರೆಗಳು, ಜೀವನ ಚಿತ್ರಗಳು, ಭಾಷಾಂತರಗಳು, ನಿಘಂಟುಗಳು, ಇಂಗ್ಲಿಷಿನಲ್ಲಿ ರಚಿಸಿದ ಗ್ರಂಥಗಳು ಸೇರಿವೆ. ಭಾರತ-ಭಾರತಿ ಪುಸ್ತಕ ಸಂಪದದ ಪ್ರಧಾನ ಸಂಪಾದಕರಾಗಿ, ಕನ್ನಡ ಭಾರತಿ, ಭಾರತೀಯ ಸಾಹಿತ್ಯ ಸಮೀಕ್ಷೆ, ಸ್ವಾತಂತ್ರ್ಯೋತ್ತರ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ, ಕಿರಿಯರ ಕರ್ನಾಟಕ, ಜ್ಞಾನ ಗಂಗೋತ್ರಿ, ಸಪ್ನಾ ಜ್ಞಾನ ದೀಪಮಾಲೆ, ಸಪ್ನಾ ದಿವ್ಯ ದರ್ಶನ ಮಾಲೆ ಮೊದಲಾದ ಹಲವು ಗ್ರಂಥ ಯೋಜನೆಗಳ ಸಂಪಾದಕರಾಗಿ ಅವರು ನೀಡಿರುವ ಕೊಡುಗೆ ಅನನ್ಯವಾದುದು. ಜೊತೆಗೆ ಅನೇಕ ಸಂಘ-ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ಕಾರ್ಯ ಸಮಿತಿಗಳ ಸದಸ್ಯರಾಗಿ ಕನ್ನಡ ನಾಡು, ನುಡಿಯ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿಯಲ್ಲಿ ನಡೆದ ೭೪ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಚುನಾಯಿಸುವ ಮೂಲಕ ಅವರನ್ನು ಗೌರವಿಸಿದೆ. ಅವರು ಪಡೆದಿರುವ ಪ್ರಶಸ್ತಿಗಳಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಅ.ನ.ಕೃ. ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಮುಖ್ಯವಾದುವು. ಕನ್ನಡ ಸಾಹಿತ್ಯವನ್ನು ಭಾರತದ ಬೇರೆ ಬೇರೆ ಭಾಷೆಗಳಿಗೆ ಪರಿಚಯಿಸಿದ ಕೆಲವೇ ಕೆಲವರಲ್ಲಿ ರಾಯರದು ಎದ್ದುಕಾಣುವ ಹೆಸರು.