ಸಾರಾಂಶ

ಪರಕೀಯರ ಬಿಗಿ ಮುಷ್ಟಿಯ ಹಿಡಿತಕ್ಕೆ ಸಿಲುಕಿ ನಲುಗಿದ್ದ ನಮ್ಮ ದೇಶ ೧೯೪೭ರ ಆಗಸ್ಟ್ ೧೫ರಂದು ಸರ್ವ ಸ್ವತಂತ್ರವಾದಾಗ ದೇಶದ ಇಡೀ ಜನತೆ ಸಂಭ್ರಮೋಲ್ಲಾಸಗಳಿಂದ ನಲಿಯಿತು. ಈ ಸ್ವಾತಂತ್ರ್ಯ ಗಳಿಕೆಯ ಹಿಂದೆ ಅಗಣಿತ ಮಂದಿಯ ಅಪಾರ ಪರಿಶ್ರಮದ, ಅಸಾಮಾನ್ಯ ಧೈರ್ಯದ, ಆಳ ದೇಶನಿಷ್ಠೆಯ ಹೋರಾಟವಿದೆ, ಅನೇಕರ ಬಲಿದಾನವಿದೆ. ಈ ಚರಿತ್ರಾರ್ಹ ಹೋರಾಟಕ್ಕೆ ಪ್ರೇರಣೆಯಾಗಿ, ಅದರಲ್ಲಿ ತಾವೂ ಭಾಗಿಯಾಗಿ ದೇಶದ ಕಣ್ಮಣಿಗಳೆನಿಸಿದ ಅನೇಕ ನಾಯಕರ ಯಾದಿಯೇ ನಮ್ಮ ಕಣ್ಣ ಮುಂದಿದೆ.
ಹಿರಿಯ ಲೇಖಕ ಜಿ.ಎಂ. ಕೃಷ್ಣಮೂರ್ತಿಯವರು ಅಪಾರ ಶ್ರಮವಹಿಸಿ ರೂಪಿಸಿಕೊಟ್ಟಿರುವ ಈ ಕೃತಿಯು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ೬೦ ಪ್ರಮುಖ ನಾಯಕರ ಚಿತ್ರಣವನ್ನು ಮನದುಂಬುವಂತೆ ಚಿತ್ರಿಸುತ್ತದೆ. ಮಹಾತ್ಮ ಗಾಂಧಿ, ರಾಜೇಂದ್ರ ಪ್ರಸಾದ್, ವಿನೋಬಾ ಭಾವೆ, ವಲ್ಲಭಬಾಯಿ ಪಟೇಲ್, ಜವಾಹರಲಾಲ್ ನೆಹರೂ, ಲಾಲಾ ಲಜಪತ್ರಾಯ್, ಭಗತ್ ಸಿಂಗ್, ಸುಭಾಷ್ಚಂದ್ರ ಬೋಸ್, ರಾಮಮನೋಹರ ಲೋಹಿಯಾ ಮೊದಲಾದವರ ದೇಶಭಕ್ತಿ, ಕಾರ್ಯ ನಿಷ್ಠೆ, ಸಂಘಟನಾ ಚಾತುರ್ಯಗಳನ್ನು ಅರಿಯುವುದೇ ಒಂದು ಚೇತೋಹಾರಿ ಅನುಭವ. ಸರಳ ಶೈಲಿಯ ಈ ಕೃತಿ ಓದುಗರ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳ ಮನ ಒಪ್ಪುವಂತಿದೆ ಎಂಬುದು ನಮ್ಮ ವಿಶ್ವಾಸ.

ಭಾರತದ ಸ್ವಾತಂತ್ರ್ಯ ಹೋರಾಟ 60 ಅಗ್ರಗಣ್ಯ ನಾಯಕರು
ಲೇಖಕರು:
ಜಿ ಎಂ ಕೃಷ್ಣಮೂರ್ತಿ
ಪ್ರಕಾರ:
ಇತರೆ
ಪ್ರಕಾಶಕರು:
ವಸಂತ ಪ್ರಕಾಶನ
ಆಕಾರ:
1/8 ಡೆಮಿ
ಮುದ್ರಣ:
2015
ರಕ್ಷಾಪುಟ:
---
ಪುಟಗಳು:
226
ಬೆಲೆ:
120 ರೂ.
ಲೇಖಕರ ಪರಿಚಯ
ಕನ್ನಡದ ಹಿರಿಯ ಲೇಖಕರಾದ ಜಿ.ಎಂ. ಕೃಷ್ಣಮೂರ್ತಿಯವರು ಜನಿಸಿದ್ದು ೧೯೪೦ರಲ್ಲಿ, ಶಿವಮೊಗ್ಗ ನಗರದಲ್ಲಿ. ೧೯೫೭ರ ವರೆಗೂ ಅಲ್ಲಿಯೇ ಶಿಕ್ಷಣ ಪಡೆದು ಎಸ್ಎಸ್ಎಲ್ಸಿ ಆದ ತರುವಾಯ ಕೆಲವು ಸಮಯ ಸರ್ಕಾರಿ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ, ನಂತರ ಮತ್ತೆ ಕೆಲವು ಕಾಲ ಅರಣ್ಯ ಇಲಾಖೆಯಲ್ಲಿ ಗಾರ್ಡ್ ಆಗಿ ಸೇವೆ ಸಲ್ಲಿಸಿದರು. ೧೯೫೯ರಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ಎರಡನೆ ದರ್ಜೆ ಸಹಾಯಕರಾಗಿ ಸೇರಿ ೧೯೮೫ರಲ್ಲಿ ಸ್ವಯಂ-ನಿವೃತ್ತಿ ಪಡೆದರು. ಪ್ರಸ್ತುತ ಬೆಂಗಳೂರಿನಲ್ಲಿದ್ದುಕೊಂಡು ಸಾಹಿತ್ಯ ಕೃಷಿ ನಡೆಸಿದ್ದಾರೆ. ಜಿಎಂಕೆಯವರು ತಮ್ಮ ಶಿಕ್ಷಣವನ್ನು ಮುಂದುವರಿಸಬೇಕೆಂಬ ಹಂಬಲದಿಂದ ಸಂಜೆ ಕಾಲೇಜಿನಲ್ಲಿ ಓದಿ ಬಿ.ಎ. ಪದವಿ ಪಡೆದರು; ನಂತರ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ವೇತನವಿಲ್ಲದ ರಜೆ ಪಡೆದು ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ.(ಕನ್ನಡ) ಪದವಿಯನ್ನು ಪ್ರಥಮ ದರ್ಜೆಯಲ್ಲಿ ತಮ್ಮದಾಗಿಸಿಕೊಂಡರು. ಡಾ. ದ.ರಾ. ಬೇಂದ್ರೆ, ಡಾ.ಬಿ.ಆರ್. ಅಂಬೇಡ್ಕರ್ ಅವರುಗಳನ್ನು ಕುರಿತಂತೆ ವ್ಯಕ್ತಿ ಚಿತ್ರಣ ಕೃತಿಗಳನ್ನು ತಂದಿರುವ ಜಿಎಂಕೆಯವರು ಅಡಾಲ್ಫ್ ಹಿಟ್ಲರನ ‘ಮೈನ್ ಕಾಂಪ್’ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಬೆದೆ ಬಂತು ಬೆನಕನಿಗೆ (ಕಾದಂಬರಿ), ಒಂದು ಜೀವನದ ಚರಿತ್ರೆ (ಕಥಾಸಂಕಲನ), ಮೋಹನದಾಸ್ ಕರಮ್ಚಂದ್ ಗಾಂಧಿ (ಆತ್ಮಕಥೆ), ವಿಶ್ವವಿಖ್ಯಾತ ಪುರಾಣಗಳು (ಅನುವಾದ), ಮಹಾಕವಿ ಕಾಳಿದಾಸ, ಭಗವಾನ್ ಬುದ್ಧ (ವ್ಯಕ್ತಿ ಚಿತ್ರಣ) ಮೊದಲಾದ ೫೦ಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ; ಅನುವಾದ ಮಾಡಿದ್ದಾರೆ. ಅಲ್ಲದೆ ಕೆಲವಾರು ಕೃತಿಗಳ ಸಂಪಾದನೆ ಮಾಡಿದ್ದಾರೆ. ವಿಜ್ಞಾನ, ಸಾಹಿತ್ಯ, ನೀತಿಕಥೆಗಳು, ವ್ಯಕ್ತಿತ್ವ ವಿಕಸನ, ಆರ್ಥಿಕ ವಿಷಯ, ಪುರಾಣ, ಚರಿತ್ರೆ, ಸಾಮಾಜಿಕ ವಿಷಯಗಳು-ಹೀಗೆ ಜಿಎಂಕೆಯವರ ಕಾರ್ಯವ್ಯಾಪ್ತಿ ವಿಶಾಲವಾದ ಕ್ಯಾನ್ವಾಸಿನದು.