ಸಾರಾಂಶ

ನಾವೇಕೆ ಪದೇ ಪದೇ ಅತಿ ಮುಖ್ಯವಾದ
'ಸಾಮರ್ಥ್ಯದ ವೈವಿಧ್ಯತೆ'ಯನ್ನು ಮರೆಯುತ್ತೇವೆ?
ಜಗತ್ತು ವಿಭಿನ್ನ ಸಾಮರ್ಥ್ಯ ಉಳ್ಳವರನ್ನು ಮುಖ್ಯವಾಹಿನಿಗೆ ತಂದುಕೊಳ್ಳುವತ್ತ ಬೀಸುಗಾಲು ಹಾಕುತ್ತಿದೆಯೆದಾರೂ ಭಾರತದಲ್ಲಿ ವಿಶೇಷಚೇತನ ಅಥವಾ ವಿಭಿನ್ನ ಸಾಮರ್ಥ್ಯದ ಮಂದಿಗೆ ಬದುಕು ಮಹಾ ಹೋರಾಟವಾಗಿಯೇ ಮುಂದುವರೆದಿದೆ. ಅವರು ತಮ್ಮ 'ಅಂಗವಿಕಲತೆ' ಸ್ಥಾನದ ಹೊರೆಯನ್ನು ಹೊತ್ತುಕೊಂಡೆ ಮುನ್ನಡೆದಿದ್ದಾರೆ; ಅವರದು ಅಮುಖ್ಯದ ಬದುಕು ಎಂದೇ ಪರಿಗಣಿಸಲಾಗುತ್ತಿದ್ದು, ನಾಗಾಲೋಟದ ಸಮಾಜವೊಂದು ಅವರನ್ನು ಬಹುಪಾಲು ಮರೆತಿರುವಂತೆಯೇ ಕಾಣಬರುತ್ತಿದೆ..
ನಮ್ಮೆಲ್ಲರಿಗಿಂತ 'ವಿಭಿನ್ನ'ರಾಗಿ ಜನ್ಮತಳೆದಿರುವ ಅವರು, 'ಸಾಮಾನ್ಯ' ಎಂಬುದು ಮುಖ್ಯವಾಗುವ ಜಗತ್ತಿನಲ್ಲಿ ಅನಾನುಕೂಲ ಸ್ಥಿತಿಯಲ್ಲಿ ಚಡಪಡಿಸುತ್ತಾರೆ. 'ಲೆಗಸಿ' ಮತ್ತು 'ಲೀಡಿಂಗ್ ಲೇಡೀಸ್' ನಂತಹ ಪ್ರಸಿದ್ಧ ಪುಸ್ತಕಗಳ ಲೇಖಕಿ ಸುಧಾ ಮೆನನ್ ಮತ್ತು 'ಎಸ್ಎಪಿ'ಯ ಉಪಾಧ್ಯಕ್ಷರೂ ಪ್ರತಿಷ್ಠಿತ 'ಇಂಡಿಯಾ ಇನ್ಕ್ಲೂಷನ್ ಸಮಿಟ್'ನ ಸ್ಥಾಪಕರೂ ಆದ ವಿ.ಆರ್. ಫಿರೋಸ್ ಬರೆದಿರುವ ಪ್ರಸ್ತುತ ಕೃತಿ
'ಗಿಫ್ಟೆಡ್', ಭಾರತದ ವಿಭಿನ್ನ ಸಾಮರ್ಥ್ಯ ಉಳ್ಳವರ ಪಯಣವನ್ನು ಮನಮುಟ್ಟುವಂತೆ ವಿವರಿಸುತ್ತದೆ. ಈ ಪಯಣದ ನಾಯಕ-ನಾಯಕಿಯರಾರೂ ಸಿಇಓಗಳಲ್ಲ
ಅಥವಾ ಯಾವುದೇ ಪ್ರಭಾವೀ ಕ್ಲಬ್ಗಳಲ್ಲಿ ಭಾಗಿಗಳಲ್ಲ. ಬದಲಿಗೆ ಅವರು ತಮ್ಮಷ್ಟಕ್ಕೆ ವಿಶೇಷರು, ಎಣೆಯಿಲ್ಲದವರು. ಹೆಸರಾಂತ ಪತ್ರಕರ್ತರೂ ಲೇಖಕರೂ ಆದ
ಎ.ಆರ್. ಮಣಿಕಾಂತ್ ಮತ್ತು ಹ.ಚ. ನಟೇಶ ಬಾಬು ಸರಾಗ ಕನ್ನಡಕ್ಕೆ ತಂದು ಕೊಟ್ಟಿರುವ ಇಲ್ಲಿನ ಕಥೆಗಳು ನಮ್ಮಲ್ಲಿನ 'ಅತಿ ಸಮರ್ಥ'ರಿಗೂ ಸ್ಫೂರ್ತಿಯನ್ನು ಒದಗಿಸಬಲ್ಲವು ಎನ್ನುವುದೇ ವಿಶೇಷ.

ಗಿಫ್ಟೆಡ್ - ವಿಶೇಷಚೇತನರ ಸ್ಫೂರ್ತಿದಾಯಕ ಕಥೆಗಳು
ಲೇಖಕರು:
ಸುಧಾ ಮೆನನ್ ವಿ ಆರ್ ಫಿರೋಸ್
ಅನುವಾದಕರು :
ಎ ಆರ್ ಮಣಿಕಾಂತ್ & ಹ ಚ ನಟೇಶ ಬಾಬು
ಪ್ರಕಾರ:
ಕಥೆ
ಪ್ರಕಾಶಕರು:
ವಸಂತ ಪ್ರಕಾಶನ
ಆಕಾರ:
1/8 ಡೆಮಿ
ಮುದ್ರಣ:
2016
ರಕ್ಷಾಪುಟ:
---
ಪುಟಗಳು:
216
ಬೆಲೆ:
180 ರೂ.
ಲೇಖಕರ ಪರಿಚಯ
ಎ.ಆರ್. ಮಣಿಕಾಂತ್ ಅವರು ಜನಿಸಿದ್ದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆಯಿತನಹಳ್ಳಿಯಲ್ಲಿ. ಓದಿದ್ದು ಮಂಡ್ಯದ ಪಿ.ಇ.ಎಸ್. ಕಾಲೇಜಿನಲ್ಲಿ ಬಿ.ಇ. ಆಟೊಮೊಬೈಲ್. ಒಲಿದಿದ್ದು ಪತ್ರಿಕೋದ್ಯಮ. ಇವರು ಪ್ರಸ್ತುತ ಕನ್ನಡಪ್ರಭದಲ್ಲಿ ಮುಖ್ಯ ಉಪಸಂಪಾದಕರಾಗಿದ್ದಾರೆ. ’ಹಾಡು ಹುಟ್ಟಿದ ಸಮಯ’, ’ಈ ಗುಲಾಬಿಯು ನಿನಗಾಗಿ’, ’ಅಮ್ಮ ಹೇಳಿದ ೮ ಸುಳ್ಳುಗಳು’, ’ಅಪ್ಪ ಅಂದ್ರೆ ಆಕಾಶ’ ಮತ್ತು ’ಭಾವತೀರಯಾನ’ ಎಂಬ ಐದು ಪುಸ್ತಕಗಳನ್ನು ಬರೆದಿದ್ದಾರೆ. ಇದರಲ್ಲಿ ’ಅಮ್ಮ ಹೇಳಿದ ೮ ಸುಳ್ಳುಗಳು’ ಪುಸ್ತಕದ ಒಂದು ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ. ಈ ಪುಸ್ತಕಕ್ಕೆ ಸೇಡಂನ ’ಅಮ್ಮ’ ಪ್ರಶಸ್ತಿ ಹಾಗೂ ’ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ’ ಪ್ರಶಸ್ತಿ ಲಭಿಸಿವೆ. ಹ.ಚ. ನಟೇಶ ಬಾಬು ಅವರ ಜನ್ಮಸ್ಥಳ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹರಳಾಪುರ. ಓದಿದ್ದು ಕನ್ನಡ ಎಂ.ಎ., ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಮತ್ತು ಸ್ನಾತಕೋತ್ತರ ಪದವಿ. ಪ್ರಸ್ತುತ ವಿಜಯಕರ್ನಾಟಕ ಪತ್ರಿಕೆಯ ವಾಣಿಜ್ಯ ವಿಭಾಗದಲ್ಲಿ ಮುಖ್ಯ ಉಪ ಸಂಪಾದಕ. ಈ ತನಕ ‘ಸಿರಿ’ (ತುಮಕೂರು ಜಿಲ್ಲಾಕವಿಗಳ ಕವನಸಂಕಲನ ಸಂಪಾದನೆ), ‘ಬ್ರಿಟನ್ ವ್ಯಂಗ್ಯಚಿತ್ರಕಾರರು’, ‘ಅಮೆರಿಕ ವ್ಯಂಗ್ಯಚಿತ್ರಕಾರರು’, ‘ಭಾರತದ ವ್ಯಂಗ್ಯಚಿತ್ರಕಾರರು’ (ಕಾರ್ಟೂನ್ ಕಿಂಗ್ಗಳಿಗೆ ಸಂಬಂಧಿಸಿದ ಮೂರು ಪುಸ್ತಕಗಳು), ‘ಅಮಿತಾಭ್ ಬಚ್ಚನ್’ (ವಿಖ್ಯಾತರ ವ್ಯಕ್ತಿಚಿತ್ರ ಮಾಲೆಗಾಗಿ), ‘ಸಿಂಗ್ ಈಸ್ ಕಿಂಗ್’ (ಡಾ.ಮನಮೋಹನ್ ಸಿಂಗ್ ಜೀವನ-ಸಾಧನೆ) ಪುಸ್ತಕಗಳು ಪ್ರಕಟ.