ಸುತ್ತಲು ಕವಿದಿರುವ ಮಂಜು ಇಂದ್ರಜಾಲದಂತೆ ಎಲ್ಲವನ್ನು ಮರೆಸಿತ್ತು. ಸೂರ್ಯ ಮೇಲೇರಿದಂತೆ ಮೋಹಕ ಇಬ್ಬನಿ ಅವಕುಂಠನ ಸರಿಸಿ ಪ್ರಕೃತಿಯ ಅಸಾಧಾರಣ, ಅದ್ಭುತ, ಅನನ್ಯವಾದ ಸೌಂದರ್ಯ ದರ್ಶನ ಮಾಡಿಸಿತ್ತು. ದೊಡ್ಡ, ಚಿಕ್ಕ ಎಲೆಗಳ ಮೇಲೆ ಮಂಜಿನ ಮಣಿಗಳು. ಎಲ್ಲಿ.... ಎಲ್ಲಿ... ನೋಡಿದರೂ ರಾಶಿಗಟ್ಟಲೆ ಹಿಮದ ಬಿಂದುಗಳು.
"ಇದೇ ಹೇಮಂತದ ಸೊಬಗು. ಈ ರಾಶಿಗಟ್ಟಲೆ ಹಿಮದ ಬಿಂದುಗಳು ಅಲ್ಪ ಕಾಲ ಮಿನುಗಿ ಅದು ಬಿಸಿಲೇರಿದಂತೆ ಮರೆಯಾಗಿ ಬಿಡುತ್ತದೆ. ಅನುಭವ ಮಾತ್ರ ದಟ್ಟವಾದದ್ದು. ಇದು ನನಗೆ ಇಷ್ಟ. ಶಾಂತಿಗೂ ಕೂಡ ಇಷ್ಟ. ಹೇಮಂತದ ಸೊಬಗಿನಂತೆ ಅನನ್ಯ. ಅವಳ ಮತ್ತು ನನ್ನ ಸ್ನೇಹಕ್ಕೆ ಇತಿಹಾಸ ಮಾತ್ರವಲ್ಲ, ವರ್ತಮಾನ, ಜೊತೆ ಭವಿಷ್ಯವು ಕೂಡ ಇರುತ್ತೆ. ನನಗೆ ಪ್ರಿಯವಾದ ಹೇಮಂತದ ಸೊಗಸನ್ನ ಸ್ಮರಿಸಬೇಕೆಂದೇನಿಲ್ಲ. ಆಯ್ಕೆ ನಿಂದೆ. ಅನರ್ಥಗಳು ಸೃಷ್ಟಿಸೋದು ಬೇಡ. ನಮ್ಮಿಬ್ಬರ ದಾರಿ ಇಲ್ಲಿಂದಲೇ ಕವಲೊಡೆಯಲಿ" ಪ್ರಭು ಅತ್ಯಂತ ಸರಳವಾಗಿ ಹೇಳಿದ. ಆದು ಅವನ ಸ್ವಭಾವ.
ಸವಿತಾಗೂ ಕೂಡ ಹೇಮಂತದ ಸೊಗಸು ಇಷ್ಟವಾಗಿರಬೇಕು. ಇಲ್ಲ ಬಲವಂತದ ಇಷ್ಟವೇ! ಸಾಮರಸ್ಯಕ್ಕೆ ಒಂದು ಉದಾಹರಣೆ. ಅದಕ್ಕೊಂದು ಅರ್ಥ ಪ್ರಭು!