ಸುಂದರದ ರಸ ನೂರು; ಸಾರವದರೊಳು ಮೂರು
ಹೊಂದಿಪ್ಪುವವು ಮೋಹ ಕರುಣೆ ಶಾಂತಿಗಳು
ಒಂದರಿಂದೊಂದು ಬೆಳೆಯಾದಂದು ಜೀವನವು
ಚಿಂದಗೊಂಡು ಜಗವೊ-ಮಂಕುತಿಮ್ಮ
ದಾರ್ಶನಿಕರು, ಚಿಂತಕರು, ಮೇಧಾವಿಗಳೂ ಆದ ಡಿವಿಜಿಯವರು ಮೇಲಿನ ಪದ್ಯದಲ್ಲಿ ಇಡೀ ಬದುಕಿನ ಸಾರವನ್ನು ಮಾತ್ರವಲ್ಲ, ಸ್ವಾರಸ್ಯವನ್ನು ರಸದ ರೂಪದಲ್ಲಿ ಹಿಡಿದಿಟ್ಟಿದ್ದಾರೆ. ಸಾವಿರಾರು ವರ್ಷಗಳಿಂದ ಭಾರತ ಜಗತ್ತಿಗೆ ಸಾರಿದ್ದು ಇದೇ ಸತ್ಯವನ್ನು. ಇದು ಮಾನವನ ಸುಖ, ಶಾಂತಿ, ಸಂತೃಪ್ತಿಗಳಿಗೆ ಭದ್ರ ಬುನಾದಿ ಹಾಕಿದೆ.
ಆ ಬುನಾದಿಯ ಮೇಲೆಯೇ ಜೀವನದ ಪ್ರಯಾಣ. ಪ್ರತಿಯೊಂದನ್ನೂ ತಮ್ಮ ಅನುಭವದ ಬೆಳಕಿನಲ್ಲಿ ನೋಡುತ್ತ, ಸಂತೋಷಿಸುತ್ತ, ನೋಯುತ್ತ, ಕೆಲವೊಮ್ಮೆ ನಿಡುಸುಯ್ಯುತ್ತ ಪಯಣಿಸುವುದೆ ಬದುಕು.
ಬರವಣಿಗೆಗೂ ಇದೇ ಅನ್ವಯಿಸುತ್ತದೆ.