ಸಾರಾಂಶ

'ಭಾರತರತ್ನ' ಡಾ. ಅಬ್ದುಲ್ ಕಲಾಂ ಅವರ ಜೀವನ ಕಥಾನಕವು ತನ್ನ ಕರ್ತೃತ್ವ ಶಕ್ತಿಯಿಂದ ಓರ್ವ ಶ್ರೇಷ್ಠ ವಿಜ್ಞಾನಿಯಾಗಿ, ತದನಂತರ ದೇಶದ ರಾಷ್ಟ್ರಪತಿಗಳೂ ಆದ ವೃತ್ತಪತ್ರಿಕೆ ಹಂಚುತ್ತಿದ್ದ ಹುಡುಗನೊಬ್ಬನ ಕತೆಯಾಗಿರುವಂತೆಯೇ ಹಿಂದೆ ಇದ್ದ ಅಪರೂಪದ ಕೋಮು ಸೌಹಾರ್ದತೆಗೆ ಅತ್ಯುತ್ತಮ ಉದಾಹರಣೆಯಾಗಿದೆ. ಖಲೀಲ್ ಗಿಬ್ರಾನ್ನನ್ನು ಓದಿಕೊಂಡಿದ್ದ ತಂದೆ ಜೈನುಲಬ್ದೀನ್, ರಾಮೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ಪಕ್ಷಿ ಲಕ್ಷ್ಮಣಶಾಸ್ತ್ರೀ, ವಿಜ್ಞಾನದ ಶಿಕ್ಷಕರಾಗಿದ್ದ ಸುಬ್ರಹ್ಮಣ್ಯ ಅಯ್ಯರ್ರಂತಹ ಧರ್ಮಸಹಿಷ್ಣುತೆಯ ಹಿರಿಯರೊಂದಿಗೆ ಬಾಳಿದ ಡಾ. ಅಬ್ದುಲ್ ಕಲಾಂ ನಿಜಕ್ಕೂ ಧನ್ಯರು.

ಹಿರಿಯ ಪತ್ರಕರ್ತ ಜಿ.ಕೆ. ಮಧ್ಯಸ್ಥ ಅವರು ಕಟ್ಟಿಕೊಟ್ಟಿರುವ ಮನಸೆಳೆಯುವ ಕಲಾಂರ ಈ ಜೀವನ ಚರಿತ್ರೆಯಲ್ಲಿ ಕಲಾಂರ ಪರಿಶ್ರಮದ ಬಾಲ್ಯ, 'ರೋಹಿಣಿ ರಾಕೆಟ್'ನ ಉಡಾವಣೆ, ಹಾವರ್ ಕ್ರಾಫ್ಟ್ ನಂದಿ-ರೇಟೋ-ಎಸ್ಎಲ್ವಿ ಉಪಗ್ರಹ ಉಡಾವಣಾ ವಾಹನ ರೂಪುಗೊಂಡ ಬಗೆ, 'ತ್ರಿಶೂಲ', 'ಅಗ್ನಿ', 'ಪೃಥ್ವಿ' ಕ್ಷಿಪಣಿಗಳು ಗಗನದಲ್ಲಿ ಚಿಮ್ಮಿದ ಪರಿ, ಪೋಕ್ರಾನ್ ಪರಮಾಣು ಪರೀಕ್ಷಾ ಸ್ಫೋಟ ಪ್ರಸಂಗ, 'ಪುರ' ಚಿಂತನೆ, ಭಾರತಕ್ಕಾಗಿ '೨೦೨೦ರ ವಿಷನ್' ಮೊದಲಾದವುಗಳು ಸಾದ್ಯಂತವಾಗಿ ಚಿತ್ರಿತವಾಗಿವೆ. ಕಲಾಂ ಅವರು ಮುಂದೆ ಓದಲೆಂದು ತಮ್ಮ ಒಡವೆಗಳನ್ನೇ ಒತ್ತೆ ಇಟ್ಟ ಅವರ ಅಕ್ಕ, ಸ್ನೇಹಿತನಾಗಿ-ಗುರುವಾಗಿ-ಮುಂದೆ ಭಾವನಾಗಿ ಕಲಾಂ ಅವರಿಗೆ ಮಾರ್ಗದರ್ಶನ ನೀಡಿದ ಜಲಾಲುದ್ದೀನ್ ಪ್ರಸಂಗಗಳು ಅಂತಃಕರಣವನ್ನು ಆರ್ದ್ರವಾಗಿ ತಾಕುತ್ತವೆ.

ಕಲಾಂ ನಿಮಗಿದೋ ಸಲಾಂ
ಲೇಖಕರು:
ಜಿ ಕೆ ಮಧ್ಯಸ್ಥ
ಪ್ರಕಾರ:
ಜೀವನಚರಿತ್ರೆ
ಪ್ರಕಾಶಕರು:
ವಸಂತ ಪ್ರಕಾಶನ
ಆಕಾರ:
1/8 ಡೆಮಿ
ಮುದ್ರಣ:
2013
ರಕ್ಷಾಪುಟ:
ರಾಮ್ ಗೌತಮ್
ಪುಟಗಳು:
200
ಬೆಲೆ:
140 ರೂ.
ಲೇಖಕರ ಪರಿಚಯ
ಹಿರಿಯ ಪತ್ರಕರ್ತ ಜಿ.ಕೆ. ಮಧ್ಯಸ್ಥ ಅವರು ಹುಟ್ಟಿದ್ದು ೧೯೪೫ರಲ್ಲಿ; ಕಾಸರಗೋಡು ತಾಲೂಕಿನ ಬೇಳ ಗ್ರಾಮದ ಕುಂಜಾರು ಎಂಬಲ್ಲಿ. ಪ್ರಾರಂಭಿಕ ವಿದ್ಯಾಭ್ಯಾಸ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ. ನಂತರ ಕಾಸರಗೋಡಿನ ಸರ್ಕಾರಿ ಕಾಲೇಜಿನಿಂದ ಬಿ.ಎ. ಪದವಿ. ನಾಲ್ಕು ದಶಕಗಳ ಕಾಲ ಉದಯವಾಣಿ, ಮುಂಗಾರು, ಪ್ರಜಾವಾಣಿ ಹಾಗೂ ವಿಜಯಕರ್ನಾಟಕ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿರುವ ಅವರು ಆರ್ಥಿಕ ವಿಷಯಗಳನ್ನು ಕುರಿತಂತೆ ಹಾಗೂ ಶಬ್ದಗಳ ಹುಟ್ಟು ಮತ್ತು ಅವು ಪಡೆಯುವ ವಿವಿಧ ಸ್ವರೂಪಗಳನ್ನು ಕುರಿತಂತೆ ಕ್ರಮವಾಗಿ ದುಡ್ಡುಕಾಸು ಮತ್ತು ಪದೋನ್ನತಿ ಕೃತಿಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ ಡಾ. ಅಬ್ದುಲ್ ಕಲಾಂ ಅವರ ಟರ್ನಿಂಗ್ ಪಾಯಿಂಟ್ಸ್ ಮತ್ತು ನನ್ನ ಪಯಣ (ಮೈ ಜರ್ನಿ) ಆತ್ಮಕಥೆಗಳನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ತಂದಿದ್ದಾರೆ. ಅಲ್ಲದೆ, ಡಾ. ಕಲಾಂ ಅವರ ಜೀವನ ಚರಿತ್ರೆ ಕಲಾಂ ನಿಮಿಗಿದೋ ಸಲಾಂ ಕೃತಿಯನ್ನೂ ಬರೆದಿದ್ದಾರೆ