ಸಾರಾಂಶ

ಆಚಾರ್ಯ ಕೃತಿ 'ಭಾರತೀಯ ಕಾವ್ಯಮೀಮಾಂಸೆ', 'ಸಮಾಲೋಕನ', 'ಕನ್ನಡ ಮಧ್ಯಮ ವ್ಯಾಕರಣ', 'ಕಾವ್ಯ ಸಮೀಕ್ಷೆ', 'ನಂಟರು', 'ಒಲುಮೆ' ಮೊದಲಾದ ಹಲವಾರು ಮೌಲಿಕ ಕೃತಿಗಳ ಮೂಲಕ ಕನ್ನಡ ವಿದ್ವತ್ತು, ವಿಮರ್ಶೆ, ಗ್ರಂಥ ಸಂಪಾದನೆ, ಭಾಷಾ ಶಾಸ್ತ್ರ ಮತ್ತು ಸೃಜನಶೀಲ ಕ್ಷೇತ್ರದಲ್ಲಿ ಅನನ್ಯ ಸೇವೆಯನ್ನು ಸಲ್ಲಿಸಿ ಚಿರನೆನಪಿನಲ್ಲಿರುವವರು ಪ್ರೊ. ತೀ.ನಂ. ಶ್ರೀಕಂಠಯ್ಯನವರು. ಅವರು 'ಕಾವ್ಯಮೀಮಾಂಸೆ' ಕ್ಷೇತ್ರದಲ್ಲಿ ಆಧುನಿಕ ಆಚಾರ್ಯ ಅಭಿನವ ಗುಪ್ತ ಎಂದು ಪ್ರಸಿದ್ಧರಾಗಿದ್ದಾರೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತೀರ್ಥಪುರ ಗ್ರಾಮದಲ್ಲಿ ಜನಿಸಿದ ತೀ.ನಂ.ಶ್ರೀ.ಯವರು ತೆಂಗಿನ ಸೀಮೆಗೆ ಸೇರಿದವರು. ತೆಂಗಿನ ಮರ ನೆಲದೊಳಗೆ ಬೇರು ಚಾಚಿ ಎತ್ತರದಲ್ಲಿ ಗರಿಬಿಚ್ಚಿ ಗೊನೆಗೊನೆ ಕಾಯಿಗಳನ್ನು ಹೊತ್ತು ನೆಟ್ಟಗೆ ನಿಲ್ಲುವಂಥದು. ಪಾಂಡಿತ್ಯದ ಹಲವು ನೆಲೆಗಳಲ್ಲಿ ಬೇರೂರಿ ಪ್ರತಿಭೆಯ ಗರಿಬಿಚ್ಚಿನಿಂತ ತೀ.ನಂ.ಶ್ರೀ.ಯವರ ವ್ಯಕ್ತಿತ್ವ ಈ ತೆಂಗಿನ ಮರಗಳಿಗೆ ತಕ್ಕ ಪ್ರತೀಕವಾಗಿದೆ.

ನಂಬಿಯಣ್ಣನ ರಗಳೆ
ಲೇಖಕರು:
ತೀ ನಂ ಶ್ರೀಕಂಠಯ್ಯ
ಪ್ರಕಾರ:
ಇತರೆ
ಪ್ರಕಾಶಕರು:
ವಸಂತ ಪ್ರಕಾಶನ
ಆಕಾರ:
1/4 ಕ್ರೌನ್
ಮುದ್ರಣ:
2017
ರಕ್ಷಾಪುಟ:
---
ಪುಟಗಳು:
184
ಬೆಲೆ:
100 ರೂ.
ಲೇಖಕರ ಪರಿಚಯ
ಹೆಸರಾಂತ ವಿದ್ವಾಂಸರೂ, ಕನ್ನಡ ಸಾರಸ್ವತ ಲೋಕಕ್ಕೆ ಮೌಲಿಕ ಕೊಡುಗೆಗಳನ್ನು ನೀಡಿದ ಲೇಖಕರೂ, ತೀನಂಶ್ರೀ ಎಂದೇ ಜನಜನಿತರೂ ಆದ ಪ್ರೊ. ತೀ.ನಂ. ಶ್ರೀಕಂಠಯ್ಯನವರು ಜನಿಸಿದ್ದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತೀರ್ಥಪುರದಲ್ಲಿ, ೧೯೦೬ರ ನವೆಂಬರ್ ೨೬ರಂದು. ತಂದೆ ನಂಜುಂಡಯ್ಯ, ತಾಯಿ ಭಾಗೀರಥಮ್ಮ. ವ್ಯಾಸಂಗದಲ್ಲಿ ಅಪಾರ ಆಸ್ಥೆಯಿದ್ದ ತೀನಂಶ್ರೀಯವರು ಬಿ.ಎ. ಪದವಿಯನ್ನು ೧೯೨೬ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಸ್ವೀಕರಿಸಿದಾಗ ಅವರು ಗಳಿಸಿದ್ದು ಆರು ಸ್ವರ್ಣ ಪದಕಗಳನ್ನು . ನಂತರ, ಅವರು ೧೯೨೯ರಲ್ಲಿ ಇಂಗ್ಲಿಷ್ ಎಂ.ಎ. ಹಾಗೂ ೧೯೩೧ರಲ್ಲಿ ಕನ್ನಡ ಎಂ.ಎ. ಪದವಿಗಳನ್ನು ಪ್ರಥಮ ಸ್ಥಾನದಲ್ಲಿ ತಮ್ಮದಾಗಿಸಿಕೊಂಡರು. ಅಮಲ್ದಾರ್ ಆಗಿ, ಮೈಸೂರು ಸಂವಿಧಾನ ಪರಿಷತ್ತಿನಲ್ಲಿ ಭಾಷಾಂತರಕಾರರಾಗಿ, ಕಾಲೇಜುಗಳಲ್ಲಿ ಸೂಪರಿಂಟೆಂಡೆಂಟ್ ಆಗಿಯೂ ಸೇವೆ ಸಲ್ಲಿಸಿರುವ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ವಿದ್ಯಾರ್ಥಿಗಳಿಗೆ ನೆಚ್ಚಿನ ಗುರುಗಳಾಗಿದ್ದವರು. ಹಾಗೂ ಪ್ರೊ. ಎ.ಆರ್. ಕೃಷ್ಣಶಾಸ್ತ್ರೀ ಮೊದಲಾದ ವಿದ್ವಾಂಸರ ಜೊತೆಯಲ್ಲಿ ಕನ್ನಡ ನಿಘಂಟಿನ ಸಿದ್ಧತೆಯ ಕಾರ್ಯದಲ್ಲಿ ಕೆಲಸ ಮಾಡಿದವರು. ೧೯೬೬ರ ಸೆಪ್ಟೆಂಬರ್ ೭ರಂದು ಸ್ವರ್ಗಸ್ಥರಾದ ಪ್ರೊ. ತೀನಂಶ್ರೀಯವರ ಲೇಖನಿಯಿಂದ ಮೂಡಿರುವ ಕೃತಿಗಳು: ಭಾರತೀಯ ಕಾವ್ಯಮೀಮಾಂಸೆ, ರನ್ನಕವಿ ಗದಾಯುದ್ಧ ಸಂಗ್ರಹಂ, ನಂಬಿಯಣ್ಣನ ರಗಳೆ, ಪಂಪ, ಒಲುಮೆ, ಕಾವ್ಯಾನುಭವ, ಕನ್ನಡ ಮಾಧ್ಯಮ ವ್ಯಾಕರಣ, ಬಿಡಿಮುತ್ತು, ಕಾವ್ಯ ಸಮೀಕ್ಷೆ, ಸಮಗ್ರ ಕವಿತೆಗಳು, ಸಮಾಲೋಕನ, ರಾಕ್ಷಸನ ಮುದ್ರಿಕೆ, ನಂಟರು, ಹೆಣ್ಣುಮಕ್ಕಳ ಪದಗಳು, Imagination in Indian Poetics and Other Literary Studies, Affricates in Kannada Speech and Other Linguistic Papers