ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರದು ರಾಮೇಶ್ವರದ ಹುಡುಗನೊಬ್ಬ
ಪ್ರಖ್ಯಾತ ವಿಜ್ಞಾನಿಯೂ ದೇಶದ ರಾಷ್ಟ್ರಪತಿಯೂ ಆದಂತಹ ಸ್ಫೂರ್ತಿದಾಯಕ ಮನೋಜ್ಞ ಕಥೆ. ಅದು ಸಂಕಲ್ಪಶಕ್ತಿ, ಧೈರ್ಯ, ನಿರಂತರ ಪರಿಶ್ರಮ ಹಾಗೂ ಗೆಲುವಿನ ಆಶಯವನ್ನು ಹೊತ್ತ ಕಥಾನಕವೇ ಆಗಿದೆ. ಈ ಕೃತಿಯಲ್ಲಿ ಡಾ. ಕಲಾಂ ಅವರು ತಮ್ಮ ಜೀವನದ ಮುಖ್ಯ ಘಟನೆಗಳನ್ನು, ಅವು ಚಿಕ್ಕವಿದ್ದರೂ, ಅವಲೋಕಿಸಿ ಅವು ಪ್ರತಿಯೊಂದೂ ಹೇಗೆ ತಮಗೆ ಗಾಢವಾದ ಪ್ರೇರಣೆ ಒದಗಿಸಿತೆಂಬುದನ್ನು ಓದುಗರಿಗೆ ತಿಳಿಸುತ್ತಾರೆ; ತಮ್ಮ ಮೇಲೆ ಗಾಢವಾಗಿ ಪ್ರಭಾವ ಬೀರಿದ ವ್ಯಕ್ತಿಗಳ ಬಗ್ಗೆ ಬೆಚ್ಚನೆಯ ಅಕ್ಕರೆಯಿಂದ ಮಾತನಾಡಿದ್ದಾರೆ; ಅಂತಹ ಮಹನೀಯರ ಸಂಗದಲ್ಲಿ ತಾವು ಕಲಿತ ಪಾಠಗಳೇನೆಂದು ತಿಳಿಸಿದ್ದಾರೆ; ಗಾಢವಾದ ದೈವಭಕ್ತಿಯ ತಂದೆ, ಕರುಣಾಳು ತಾಯಿ, ತಮ್ಮ ವಿಚಾರಗಳನ್ನೂ ಜೀವನ ದೃಷ್ಟಿಯನ್ನೂ ರೂಪಿಸಿದ ಮಾರ್ಗದರ್ಶಿಗಳು - ಇಂತಹ ತನ್ನ ಸಮೀಪವರ್ತಿಗಳ ಆಪ್ತ ಚಿತ್ರಣವೊಂದನ್ನು ಬಿಡಿಸಿಟ್ಟಿದ್ದಾರೆ.
ಬಂಗಾಳ ಕೊಲ್ಲಿಯ ತೀರದ ಸಣ್ಣಪಟ್ಟಣವೊಂದರಲ್ಲಿ ಬಾಲ್ಯವನ್ನು ಕಳೆದು, ಒಬ್ಬ ವಿಜ್ಞಾನಿಯಾಗುವ ಹಾಗೂ ನಂತರ ನಾಡಿನ ರಾಷ್ಟ್ರಪತಿಯಾಗುವ ಮಾರ್ಗದಲ್ಲಿನ
ಹೋರಾಟಗಳ ಹಾಗೂ ತ್ಯಾಗಗಳ ಹೃದಯಸ್ಪರ್ಶಿ ಕಥನ ಇಲ್ಲಿದೆ.
ಭಾವುಕವೂ ಪ್ರಾಮಾಣಿಕವೂ ತೀರಾ ವೈಯಕ್ತಿಕವೂ ಆಗಿರುವ ನನ್ನ ಪಯಣ
ಒಂದು ಅಪರೂಪದ ಅಂತೆಯೇ ಸಮೃದ್ಧ ಬದುಕಿನ ಮನೋಜ್ಞ ಕಥೆಯಾಗಿದೆ; ಹಾಗೆಯೇ ಮಕ್ಕಳಿಗೆ ಹಾಗೂ ಯುವಜನತೆಗೆ ಮಾರ್ಗದರ್ಶನ ಒದಗಿಸುವ ಕಥೆಯಾಗಿಯೂ ಮೈದಾಳಿದೆ.