ಸಾರಾಂಶ

'ಭಾರತೀಯ ಕಾವ್ಯಮೀಮಾಂಸೆ', 'ನಂಬಿಯಣ್ಣನ ರಗಳೆ', 'ಕಾವ್ಯ ಸಮೀಕ್ಷೆ' ಮೊದಲಾದ ಹಲವಾರು ಮೌಲಿಕ ಕೃತಿಗಳ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅನನ್ಯ ಸೇವೆಯನ್ನು ಸಲ್ಲಿಸಿದವರು ಹೆಸರಾಂತ ವಿದ್ವಾಂಸ ತೀ.ನಂ.ಶ್ರೀ. ಅವರು. 'ರನ್ನ ಕವಿ ಗದಾಯುದ್ಧ ಸಂಗ್ರಹಂ' ಕೃತಿಯನ್ನು ಅವರು ಸಂಪಾದಿಸಿಕೊಟ್ಟು ಇದಾಗಲೆ ಅರವತ್ತು ವರ್ಷಗಳು ಸಂದಿವೆ. ಅಂದಿನಿಂದಲೂ ನಿರಂತರ ಬೇಡಿಕೆಯನ್ನು ಪಡೆದು ಹಲವಾರು ಮುದ್ರಣಗಳನ್ನು ಕಂಡಿದೆ.
* * *
...ತೀ.ನಂ.ಶ್ರೀ. ಯವರು ಸಂಶೋಧನೆ, ವಿಮರ್ಶೆ, ಛಂದಸ್ಸು, ಭಾಷಾಶಾಸ್ತ್ರ ಮೊದಲಾದ ಹಲವು ಕ್ಷೇತ್ರಗಳಲ್ಲಿ ತಮ್ಮ ಕೃಷಿಯನ್ನು ಮುಂದುವರಿಸಿ, ಮುಖ್ಯವಾಗಿ ಬಹುದೊಡ್ಡ ವಿದ್ವಾಂಸರೆಂದು ಹೆಸರು ಗಳಿಸಿದರೂ ಕೂಡ, ಅವರು ತಮ್ಮೊಳಗಿನ ಕವಿಯನ್ನು ಕಳೆದುಕೊಳ್ಳಲಿಲ್ಲ, ಸತ್ಕಾವ್ಯದ ಬಗೆಗಿನ ರುಚಿಯನ್ನು ಕಡಿಮೆ ಮಾಡಿಕೊಳ್ಳಲಿಲ್ಲ. ರನ್ನನ 'ಗದಾಯುದ್ಧ' ಸಂಗ್ರಹಕ್ಕೆ ಅವರು ಕೊನೆಯಲ್ಲಿ ಸಿದ್ಧಪಡಿಸಿರುವ ಟಿಪ್ಪಣಿಗಳಂತೂ, ವಿದ್ವತ್ ಪೂರ್ಣವಾದ ಸಂಶೋಧನಾತ್ಮಕ ವಿಮರ್ಶೆಯ ಹೆಜ್ಜೆಗಳೆಂಬುದನ್ನು ಯಾರಾದರೂ ಗುರುತಿಸಬಹುದು. ಅವರು ಬರೆದಿರುವ 'ಭಾರತೀಯ ಕಾವ್ಯ ಮೀಮಾಂಸೆ' ಯನ್ನು ಕವಿ ಕುವೆಂಪು ಅವರು ಅದೊಂದು ಆಚಾರ್ಯ ಕೃತಿ ಎಂದು ಪ್ರಶಂಸಿಸಿದ್ದಾರೆ.

ರನ್ನ ಕವಿ ಗದಾಯುದ್ಧ ಸಂಗ್ರಹಂ
ಲೇಖಕರು:
ತೀ. ನಂ. ಶ್ರೀಕಂಠಯ್ಯ
ಪ್ರಕಾರ:
ಇತರೆ
ಪ್ರಕಾಶಕರು:
ವಸಂತ ಪ್ರಕಾಶನ
ಆಕಾರ:
1/6 ಡೆಮಿ
ಮುದ್ರಣ:
2015
ರಕ್ಷಾಪುಟ:
---
ಬೆನ್ನುಡಿ:
ಡಾ. ಜಿ.ಎಸ್. ಶಿವರುದ್ರಪ್ಪ
ಪುಟಗಳು:
226
ಬೆಲೆ:
100 ರೂ.
ಲೇಖಕರ ಪರಿಚಯ
ಹೆಸರಾಂತ ವಿದ್ವಾಂಸರೂ, ಕನ್ನಡ ಸಾರಸ್ವತ ಲೋಕಕ್ಕೆ ಮೌಲಿಕ ಕೊಡುಗೆಗಳನ್ನು ನೀಡಿದ ಲೇಖಕರೂ, ತೀನಂಶ್ರೀ ಎಂದೇ ಜನಜನಿತರೂ ಆದ ಪ್ರೊ. ತೀ.ನಂ. ಶ್ರೀಕಂಠಯ್ಯನವರು ಜನಿಸಿದ್ದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತೀರ್ಥಪುರದಲ್ಲಿ, ೧೯೦೬ರ ನವೆಂಬರ್ ೨೬ರಂದು. ತಂದೆ ನಂಜುಂಡಯ್ಯ, ತಾಯಿ ಭಾಗೀರಥಮ್ಮ. ವ್ಯಾಸಂಗದಲ್ಲಿ ಅಪಾರ ಆಸ್ಥೆಯಿದ್ದ ತೀನಂಶ್ರೀಯವರು ಬಿ.ಎ. ಪದವಿಯನ್ನು ೧೯೨೬ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಸ್ವೀಕರಿಸಿದಾಗ ಅವರು ಗಳಿಸಿದ್ದು ಆರು ಸ್ವರ್ಣ ಪದಕಗಳನ್ನು . ನಂತರ, ಅವರು ೧೯೨೯ರಲ್ಲಿ ಇಂಗ್ಲಿಷ್ ಎಂ.ಎ. ಹಾಗೂ ೧೯೩೧ರಲ್ಲಿ ಕನ್ನಡ ಎಂ.ಎ. ಪದವಿಗಳನ್ನು ಪ್ರಥಮ ಸ್ಥಾನದಲ್ಲಿ ತಮ್ಮದಾಗಿಸಿಕೊಂಡರು. ಅಮಲ್ದಾರ್ ಆಗಿ, ಮೈಸೂರು ಸಂವಿಧಾನ ಪರಿಷತ್ತಿನಲ್ಲಿ ಭಾಷಾಂತರಕಾರರಾಗಿ, ಕಾಲೇಜುಗಳಲ್ಲಿ ಸೂಪರಿಂಟೆಂಡೆಂಟ್ ಆಗಿಯೂ ಸೇವೆ ಸಲ್ಲಿಸಿರುವ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ವಿದ್ಯಾರ್ಥಿಗಳಿಗೆ ನೆಚ್ಚಿನ ಗುರುಗಳಾಗಿದ್ದವರು. ಹಾಗೂ ಪ್ರೊ. ಎ.ಆರ್. ಕೃಷ್ಣಶಾಸ್ತ್ರೀ ಮೊದಲಾದ ವಿದ್ವಾಂಸರ ಜೊತೆಯಲ್ಲಿ ಕನ್ನಡ ನಿಘಂಟಿನ ಸಿದ್ಧತೆಯ ಕಾರ್ಯದಲ್ಲಿ ಕೆಲಸ ಮಾಡಿದವರು. ೧೯೬೬ರ ಸೆಪ್ಟೆಂಬರ್ ೭ರಂದು ಸ್ವರ್ಗಸ್ಥರಾದ ಪ್ರೊ. ತೀನಂಶ್ರೀಯವರ ಲೇಖನಿಯಿಂದ ಮೂಡಿರುವ ಕೃತಿಗಳು: ಭಾರತೀಯ ಕಾವ್ಯಮೀಮಾಂಸೆ, ರನ್ನಕವಿ ಗದಾಯುದ್ಧ ಸಂಗ್ರಹಂ, ನಂಬಿಯಣ್ಣನ ರಗಳೆ, ಪಂಪ, ಒಲುಮೆ, ಕಾವ್ಯಾನುಭವ, ಕನ್ನಡ ಮಾಧ್ಯಮ ವ್ಯಾಕರಣ, ಬಿಡಿಮುತ್ತು, ಕಾವ್ಯ ಸಮೀಕ್ಷೆ, ಸಮಗ್ರ ಕವಿತೆಗಳು, ಸಮಾಲೋಕನ, ರಾಕ್ಷಸನ ಮುದ್ರಿಕೆ, ನಂಟರು, ಹೆಣ್ಣುಮಕ್ಕಳ ಪದಗಳು, Imagination in Indian Poetics and Other Literary Studies, Affricates in Kannada Speech and Other Linguistic Papers