ಸಾರಾಂಶ

ವಿಶ್ವಕವಿಗಳ ವಿರಳ ಪಂಕ್ತಿಯಲ್ಲಿ ವಿಶಿಷ್ಟ ತೇಜಸ್ಸಿನಿಂದ ಬೆಳಗುವ ಕವಿ, ನಾಟಕಕಾರ ಇಂಗ್ಲೆಂಡಿನ ವಿಲಿಯಂ ಷೇಕ್ಸ್ಪಿಯರ್ (೧೫೬೪-೧೬೧೬). ವಿಶ್ವವಿದ್ಯಾನಿಲಯಕ್ಕೆ
ಕಾಲಿಡದ ಈತ ತನ್ನ ಪ್ರತಿಭೆಯಿಂದ ಇಂದೂ ಜಗತ್ತು ಬೆರಗಾಗುವಂತೆ ಮಾನವ ಸ್ವಭಾವದ ಅನಾವರಣ ಮಾಡಿದ. ಮಾನವನ ಬದುಕನ್ನು ವಿಶಿಷ್ಟ ಒಳನೋಟಗಳಿಂದ ಪುನರ್ಸೃಷ್ಟಿ ಮಾಡಿದ. ಸಮನಿಲ್ಲದ ಇಂತಹ ಮೇರು ಪ್ರತಿಭೆಯ ಕವಿ, ನಾಟಕಕಾರನ ಆಯ್ದ ೨೦ ನಾಟಕಗಳ ಕಥೆಯನ್ನು ಚಾರ್ಲ್ಸ್ ಮತ್ತು ಮೇರಿ ಲ್ಯಾಂಬ್ ಸರಳವಾಗಿ ಆದರೆ ಅತ್ಯಂತ ರೋಚಕವಾಗಿ ತಮ್ಮ 'ಟೇಲ್ಸ್ ಫ್ರಂ ಷೇಕ್ಸ್ಪಿಯರ್' ಕೃತಿಯಲ್ಲಿ ಸಂಗ್ರಹಿಸಿದ್ದಾರೆ. ೧೮೦೭ರಲ್ಲಿ ಪ್ರಕಟಗೊಂಡ ಈ ಕಥಾನಕಗಳು ಎರಡು
ಶತಮಾನಗಳ ಕಾಲದುದ್ದಕ್ಕೂ ಎಲ್ಲ ವಯೋಮಾನದವರನ್ನೂ ಸಮಾನವಾಗಿ ಆಕರ್ಷಿಸಿದೆಯಲ್ಲದೆ ಇಂದಿಗೂ ಷೇಕ್ಸ್ಪಿಯರ್ ನಾಟಕಗಳಿಗೆ ಉತ್ತಮ
ಪ್ರವೇಶಿಕೆಯೆಂಬ ಪ್ರಶಂಸೆಗೆ ಪಾತ್ರವಾಗಿದೆ.
೪೦ ವರ್ಷಗಳ ಕಾಲ ಷೇಕ್ಸ್ಪಿಯರ್ ನಾಟಕಗಳ ಅಧ್ಯಯನ, ಅಧ್ಯಾಪನಗಳಲ್ಲಿ ನಿರತರಾಗಿದ್ದ ಕನ್ನಡದ ಖ್ಯಾತ ವಿಮರ್ಶಕ ಪ್ರೊ. ಎಲ್.ಎಸ್. ಶೇಷಗಿರಿ ರಾವ್
ಅವರ ಈ ಭಾವಾನುವಾದದಲ್ಲಿ ಷೇಕ್ಸ್ಪಿಯರ್ ನಾಟಕ ಕಥಾನಕಗಳು ಚಾರ್ಲ್ಸ್
ಮತ್ತು ಮೇರಿ ಲ್ಯಾಂಬ್ರ ಮೂಲದ ಸ್ವರೂಪ, ಸರಳತೆ ಹಾಗೂ ರೋಚಕತೆಯನ್ನು ಉಳಿಸಿಕೊಂಡು ಅಚ್ಚ ಕನ್ನಡ ಭಾಷಾ ಶೈಲಿಯ ಸೊಗಸು ಮತ್ತು ಸೊಗಡುಗಳಿಂದಾಗಿ ಕನ್ನಡದಲ್ಲಿಯೇ ಹುಟ್ಟಿಬಂದವೇನೋ ಎಂಬಷ್ಟು ಸಹಜವಾಗಿ ಮೂಡಿಬಂದಿವೆ.

ಷೇಕ್ಸ್ಪಿಯರ್ ಹೇಳಿದ ಕಥೆಗಳು
ಲೇಖಕರು:
ಚಾರ್ಲ್ಸ್ & ಮೇರಿ ಲ್ಯಾಂಬ್
ಅನುವಾದಕರು :
ಪ್ರೊ ಎಲ್ ಎಸ್ ಶೇಷಗಿರಿ ರಾವ್
ಪ್ರಕಾರ:
ಕಥೆ
ಪ್ರಕಾಶಕರು:
ವಸಂತ ಪ್ರಕಾಶನ
ಆಕಾರ:
1/8 ಡೆಮಿ
ಮುದ್ರಣ:
2014
ರಕ್ಷಾಪುಟ:
ರಘು ಅಪಾರ
ಪುಟಗಳು:
234
ಬೆಲೆ:
160 ರೂ.
ಲೇಖಕರ ಪರಿಚಯ
ಪ್ರೊ ಎಲ್.ಎಸ್. ಶೇಷಗಿರಿ ರಾವ್ ಅವರು ಹುಟ್ಟಿದ್ದು ೧೯೨೫ರಲ್ಲಿ, ಬೆಂಗಳೂರಿನಲ್ಲಿ. ಇಂಗ್ಲಿಷ್ ಭಾಷೆ, ಸಾಹಿತ್ಯಗಳಲ್ಲಿ ಬಂಗಾರದ ಪದಕಗಳೊಡನೆ ಎಂ.ಎ. ಪದವಿ ಪಡೆದ ಅವರು ಹಲವು ಸರ್ಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಇಂಗ್ಲಿಷ್ ವಿಭಾಗದಿಂದ ನಿವೃತ್ತರಾದರು. ನಂತರ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು. ಕನ್ನಡ ಪುಸ್ತಕ ಪ್ರಾಧಿಕಾರದ ಮೊದಲನೆಯ ಅಧ್ಯಕ್ಷರು ಅವರು. ಹಲವು ದೇಶಗಳ ಸಾಹಿತ್ಯಗಳ ಅಧ್ಯಯನದ ಫಲವನ್ನು ಧಾರೆ ಎರೆದು ಕನ್ನಡ ಸಾಹಿತ್ಯ ವಿಮರ್ಶೆಗೆ ಹೊಸ ಚೈತನ್ಯ ತಂದುಕೊಡುವ ಮೂಲಕ ವಿಮರ್ಶಾ ಕ್ಷೇತ್ರದಲ್ಲಿ ಅಗ್ರಗಣ್ಯರೆನಿಸಿದ ರಾಯರು ಎಪ್ಪತ್ತೈದಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಸಣ್ಣಕತೆಗಳು, ವಿಮರ್ಶಾ ಕೃತಿಗಳು, ಸಾಹಿತ್ಯ ಚರಿತ್ರೆಗಳು, ಜೀವನ ಚಿತ್ರಗಳು, ಭಾಷಾಂತರಗಳು, ನಿಘಂಟುಗಳು, ಇಂಗ್ಲಿಷಿನಲ್ಲಿ ರಚಿಸಿದ ಗ್ರಂಥಗಳು ಸೇರಿವೆ. ಭಾರತ-ಭಾರತಿ ಪುಸ್ತಕ ಸಂಪದದ ಪ್ರಧಾನ ಸಂಪಾದಕರಾಗಿ, ಕನ್ನಡ ಭಾರತಿ, ಭಾರತೀಯ ಸಾಹಿತ್ಯ ಸಮೀಕ್ಷೆ, ಸ್ವಾತಂತ್ರ್ಯೋತ್ತರ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ, ಕಿರಿಯರ ಕರ್ನಾಟಕ, ಜ್ಞಾನ ಗಂಗೋತ್ರಿ, ಸಪ್ನಾ ಜ್ಞಾನ ದೀಪಮಾಲೆ, ಸಪ್ನಾ ದಿವ್ಯ ದರ್ಶನ ಮಾಲೆ ಮೊದಲಾದ ಹಲವು ಗ್ರಂಥ ಯೋಜನೆಗಳ ಸಂಪಾದಕರಾಗಿ ಅವರು ನೀಡಿರುವ ಕೊಡುಗೆ ಅನನ್ಯವಾದುದು. ಜೊತೆಗೆ ಅನೇಕ ಸಂಘ-ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ಕಾರ್ಯ ಸಮಿತಿಗಳ ಸದಸ್ಯರಾಗಿ ಕನ್ನಡ ನಾಡು, ನುಡಿಯ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿಯಲ್ಲಿ ನಡೆದ ೭೪ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಚುನಾಯಿಸುವ ಮೂಲಕ ಅವರನ್ನು ಗೌರವಿಸಿದೆ. ಅವರು ಪಡೆದಿರುವ ಪ್ರಶಸ್ತಿಗಳಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಅ.ನ.ಕೃ. ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಮುಖ್ಯವಾದುವು. ಕನ್ನಡ ಸಾಹಿತ್ಯವನ್ನು ಭಾರತದ ಬೇರೆ ಬೇರೆ ಭಾಷೆಗಳಿಗೆ ಪರಿಚಯಿಸಿದ ಕೆಲವೇ ಕೆಲವರಲ್ಲಿ ರಾಯರದು ಎದ್ದುಕಾಣುವ ಹೆಸರು.