ಒಂದು ಗಂಟೆಯ ನಿರಂತರ ನೋವಿನಾಟದ ನಂತರ ಮಗು ಹೊರಗೆ ಬಂತು. ಎಂಟೂವರೆ ಪೌಂಡ್ನಷ್ಟು ತೂಕದ ಮುದ್ದಾದ ಗಂಡು ಮಗು. ಸೋತು ಕಣ್ಮುಚ್ಚಿದ ಮಡದಿಯ ಪಕ್ಕದಲ್ಲಿ ತೊಳೆದ ಮುತ್ತಿನಂತಿದ್ದ ಮಗುವನ್ನು ನೋಡಿದ ಶಂಕರ್ 'ತನ್ನ ಮರು ಹುಟ್ಟು' ಎನ್ನುವಂತೆ ಹರ್ಷಿಸಿದ.
'ಅಮ್ಮನಿಗೆ ಬಹಳ ಹಿಂಸೆ ಕೊಟ್ಟ ಪೋರ' - ಎನ್ನುತ್ತಾ ಡಾಕ್ಟರ್ ಸ್ವರ್ಣಲತ ಕೈತೊಳೆದು ಬಂದು ಶಂಕರ್ ಕಡೆ ಅಚ್ಚರಿಯಿಂದ ನೋಡಿ 'ನನ್ನ ನರ್ಸಿಂಗ್ ಹೋಂನಲ್ಲಿ ಎಷ್ಟೋ ಹೆರಿಗೆಗಳು ಆಗಿವೆ. ಆದರೆ ಲೇಬರ್ವಾರ್ಡಿಗೆ ಬಂದು ಮಡದಿಯ ಬಳಿ ನಿಂತು ನೋವನ್ನು ಸಮಪಾಲಾಗಿ ಹಂಚಿಕೊಂಡವರು ನೀವೊಬ್ಬರೇ. ಫೆಂಟಾಸ್ಟಿಕ್, ರಿಯಲಿ ಗ್ರೇಟ್!' ಎಂದರು. ಶಂಕರ್ ತುಟಿಯಂಚಿನಲ್ಲಿ ಕಿರು ನಗುವೊಂದು ಮಿನುಗಿತು.