ಸಾರಾಂಶ

ನಾವಿಂದು ಪ್ರಜಾಪ್ರಭುತ್ವ ಗಟ್ಟಿಯಾಗಿ ನೆಲೆಯಾಗಿರುವ ದೇಶದ ಸರ್ವ ಸ್ವತಂತ್ರ ಪ್ರಜೆಗಳು; ಪ್ರಗತಿಯ ಹೆಜ್ಜೆಗಳನ್ನು ದಾಪುಗಾಲಲ್ಲಿ ಇಡುತ್ತಿರುವ ದೇಶದ ಮಕ್ಕಳು. ಇವೆಲ್ಲ ಆಗಿ ಕೇವಲ ೬೮ ವರ್ಷಗಳಷ್ಟು ಕಳೆದಿವೆಯಷ್ಟೆ. ಆದರೆ ಅದಕ್ಕಿಂತ ಹಿಂದೆ? ಪರಾಧೀನತೆಯ ದುಸ್ಥಿತಿ ನಮ್ಮದು. ಅಲೆಗ್ಸಾಂಡರ್, ಮಹಮ್ಮದೀಯರು, ಫ್ರೆಂಚರು, ಬ್ರಿಟಿಷರು - ಹೀಗೆ ಪರದೇಶದವರು ದಂಡಿ ದಂಡಿಯಾಗಿ ಬಂದು ದಾಳಿ ಮಾಡುತ್ತಲೋ ನೆಲೆಯಾಗುತ್ತಲೋ ದೇಶದ ಸ್ವಾಭಿಮಾನಕ್ಕೆ ಎರವಾದರು. ಬ್ರಿಟಿಷರಂತೂ ದೀರ್ಘಕಾಲ ದೇಶದ ಉದ್ದಗಲಕ್ಕೂ ತಮ್ಮ ದೈತ್ಯ ಮುಷ್ಟಿಯಲ್ಲಿ ಭಾರತವನ್ನು ಹಿಡಿದಿಟ್ಟುಕೊಂಡರು.
ಹಿರಿಯ ಲೇಖಕರಾದ ಜಿ.ಎಂ. ಕೃಷ್ಣಮೂರ್ತಿಯವರು ರೂಪಿಸಿಕೊಟ್ಟಿರುವ ಪ್ರಸ್ತುತ ಕೃತಿಯು ಈ ಎಲ್ಲವನ್ನು ಚಿತ್ರಿಸುತ್ತ ಬ್ರಿಟಿಷರ ವಸಾಹತು, ಅವರ ಏಳಿಗೆ, ಆಂಗ್ಲ-ಮೈಸೂರು ಹಾಗೂ ಆಂಗ್ಲ-ಮರಾಠ ಕದನಗಳು, ಸನ್ಯಾಸಿ ದಂಗೆ, ಸಿಪಾಯಿ ದಂಗೆ, ಕಾಂಗ್ರೆಸ್ ಸ್ಥಾಪನೆ, ಗಾಂಧೀಜಿಯವರ ಸತ್ಯಾಗ್ರಹ, ಭಗತ್ ಸಿಂಗ್ ಹಾಗೂ ಅವರ ಗೆಳೆಯರ ಹೋರಾಟಗಳು, ನೀಲಿದಂಗೆ, ವಿದೇಶಿ ವಸ್ತುಗಳ ಬಹಿಷ್ಕಾರ, ವಿನಾಯಕ ದಾಮೋದರ ಸಾವರ್‌ಕರ್ ಅವರ ಕ್ರಾಂತಿಯ ಹೆಜ್ಜೆಗಳು, ನಾಗರಿಕ ಅಸಹಕಾರ ಚಳವಳಿ, ಸುಭಾಷ್‌ಚಂದ್ರ ಬೋಸರ ಕಾರ್ಯಾಚರಣೆ, ದಂಡಿ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳವಳಿ - ಹೀಗೆ ಸ್ವಾತಂತ್ರ್ಯವನ್ನು ಗಳಿಸುವ ನಿಟ್ಟಿನಲ್ಲಿ ನಮ್ಮ ಜನ ನಾಯಕರು ಹಮ್ಮಿಕೊಂಡ ಹೋರಾಟಗಳನ್ನೂ ಅವುಗಳಿಗೆ ಬೆಂಬಲವಾಗಿ ಜನರು ತೋರಿದ ದಿಟ್ಟತನವನ್ನೂ ಸರಳ ಶೈಲಿಯಲ್ಲಿ ಕಟ್ಟಿಕೊಡುತ್ತದೆ. ದೇಶದ ಸ್ವಾತಂತ್ರ್ಯ ಹೋರಾಟವನ್ನು ಅರಿಯಲು ಬಯಸುವವರಿಗೆ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಒಂದು ಕೈಪಿಡಿ ಈ ಕೃತಿ. ಕರ್ನಾಟಕದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟವನ್ನು ಒಂದು ಪ್ರತ್ಯೇಕ ಅಧ್ಯಾಯದಲ್ಲಿಯೇ ಚಿತ್ರಿಸಲಾಗಿದೆ.

ಸ್ವಾತಂತ್ರ್ಯ ಹೋರಾಟದ ಸಂಕ್ಷಿಪ್ತ ಇತಿಹಾಸ
ಲೇಖಕರು:
ಜಿ ಎಂ ಕೃಷ್ಣಮೂರ್ತಿ
ಪ್ರಕಾರ:
ಇತರೆ
ಪ್ರಕಾಶಕರು:
ವಸಂತ ಪ್ರಕಾಶನ
ಆಕಾರ:
1/8 ಡೆಮಿ
ಮುದ್ರಣ:
2015
ರಕ್ಷಾಪುಟ:
---
ಪುಟಗಳು:
162
ಬೆಲೆ:
90 ರೂ.
ಲೇಖಕರ ಪರಿಚಯ
ಕನ್ನಡದ ಹಿರಿಯ ಲೇಖಕರಾದ ಜಿ.ಎಂ. ಕೃಷ್ಣಮೂರ್ತಿಯವರು ಜನಿಸಿದ್ದು ೧೯೪೦ರಲ್ಲಿ, ಶಿವಮೊಗ್ಗ ನಗರದಲ್ಲಿ. ೧೯೫೭ರ ವರೆಗೂ ಅಲ್ಲಿಯೇ ಶಿಕ್ಷಣ ಪಡೆದು ಎಸ್ಎಸ್ಎಲ್ಸಿ ಆದ ತರುವಾಯ ಕೆಲವು ಸಮಯ ಸರ್ಕಾರಿ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ, ನಂತರ ಮತ್ತೆ ಕೆಲವು ಕಾಲ ಅರಣ್ಯ ಇಲಾಖೆಯಲ್ಲಿ ಗಾರ್ಡ್ ಆಗಿ ಸೇವೆ ಸಲ್ಲಿಸಿದರು. ೧೯೫೯ರಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ಎರಡನೆ ದರ್ಜೆ ಸಹಾಯಕರಾಗಿ ಸೇರಿ ೧೯೮೫ರಲ್ಲಿ ಸ್ವಯಂ-ನಿವೃತ್ತಿ ಪಡೆದರು. ಪ್ರಸ್ತುತ ಬೆಂಗಳೂರಿನಲ್ಲಿದ್ದುಕೊಂಡು ಸಾಹಿತ್ಯ ಕೃಷಿ ನಡೆಸಿದ್ದಾರೆ. ಜಿಎಂಕೆಯವರು ತಮ್ಮ ಶಿಕ್ಷಣವನ್ನು ಮುಂದುವರಿಸಬೇಕೆಂಬ ಹಂಬಲದಿಂದ ಸಂಜೆ ಕಾಲೇಜಿನಲ್ಲಿ ಓದಿ ಬಿ.ಎ. ಪದವಿ ಪಡೆದರು; ನಂತರ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ವೇತನವಿಲ್ಲದ ರಜೆ ಪಡೆದು ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ.(ಕನ್ನಡ) ಪದವಿಯನ್ನು ಪ್ರಥಮ ದರ್ಜೆಯಲ್ಲಿ ತಮ್ಮದಾಗಿಸಿಕೊಂಡರು. ಡಾ. ದ.ರಾ. ಬೇಂದ್ರೆ, ಡಾ.ಬಿ.ಆರ್. ಅಂಬೇಡ್ಕರ್ ಅವರುಗಳನ್ನು ಕುರಿತಂತೆ ವ್ಯಕ್ತಿ ಚಿತ್ರಣ ಕೃತಿಗಳನ್ನು ತಂದಿರುವ ಜಿಎಂಕೆಯವರು ಅಡಾಲ್ಫ್ ಹಿಟ್ಲರನ ‘ಮೈನ್ ಕಾಂಪ್’ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಬೆದೆ ಬಂತು ಬೆನಕನಿಗೆ (ಕಾದಂಬರಿ), ಒಂದು ಜೀವನದ ಚರಿತ್ರೆ (ಕಥಾಸಂಕಲನ), ಮೋಹನದಾಸ್ ಕರಮ್ಚಂದ್ ಗಾಂಧಿ (ಆತ್ಮಕಥೆ), ವಿಶ್ವವಿಖ್ಯಾತ ಪುರಾಣಗಳು (ಅನುವಾದ), ಮಹಾಕವಿ ಕಾಳಿದಾಸ, ಭಗವಾನ್ ಬುದ್ಧ (ವ್ಯಕ್ತಿ ಚಿತ್ರಣ) ಮೊದಲಾದ ೫೦ಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ; ಅನುವಾದ ಮಾಡಿದ್ದಾರೆ. ಅಲ್ಲದೆ ಕೆಲವಾರು ಕೃತಿಗಳ ಸಂಪಾದನೆ ಮಾಡಿದ್ದಾರೆ. ವಿಜ್ಞಾನ, ಸಾಹಿತ್ಯ, ನೀತಿಕಥೆಗಳು, ವ್ಯಕ್ತಿತ್ವ ವಿಕಸನ, ಆರ್ಥಿಕ ವಿಷಯ, ಪುರಾಣ, ಚರಿತ್ರೆ, ಸಾಮಾಜಿಕ ವಿಷಯಗಳು-ಹೀಗೆ ಜಿಎಂಕೆಯವರ ಕಾರ್ಯವ್ಯಾಪ್ತಿ ವಿಶಾಲವಾದ ಕ್ಯಾನ್ವಾಸಿನದು.