ಎಂದಿನಂತೆ ಅದೊಂದು ಸಾಮಾನ್ಯ ದಿನ. ಅಣ್ಣಾ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ 'ವಿಷನ್ ಟು ಮಿಷನ್' ಎಂಬ ವಿಷಯದ ಬಗೆಗೆ ನಾನೊಂದು ಉಪನ್ಯಾಸ ನೀಡಿದ್ದೆ. ಒಂದು ತಾಸಿನ ಅದರ ಅವಧಿ ಎರಡು ತಾಸಿನವರೆಗೆ ಮುಂದುವರಿದಿತ್ತು. ಆಮೇಲೆ ಸಂಶೋಧನ ವಿದ್ಯಾರ್ಥಿಗಳ ಒಂದು ತಂಡದ ಜೊತೆ ಊಟ ಮಾಡಿ ಮತ್ತೆ ತರಗತಿಗೆ ಹಿಂದಿರುಗಿದೆ. ಸಂಜೆ ನನ್ನ ಕೊಠಡಿಗೆ ಹಿಂತಿರುಗುತ್ತಿರುವಾಗ ಜೊತೆಗೆ ಬಂದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕಲಾನಿಧಿಯವರು 'ಬೆಳಗಿನಿಂದಲೂ ಯಾರೋ ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರು' ಎಂದರು. ನಾನು ಕೊಠಡಿಯನ್ನು ಪ್ರವೇಶಿಸಿದಾಗಲೂ ಟೆಲಿಪೋನ್ ಹೊಡೆದುಕೊಳ್ಳುತ್ತಿತ್ತು. ಆ ಕಡೆಯಿಂದ 'ಪ್ರಧಾನಿಯವರು ನಿಮ್ಮ ಜೊತೆ ಮಾತಾಡಬಯಸಿದ್ದಾರೆ...' ಎಂಬ ಒಂದು ಧ್ವನಿ. ಕೆಲವು ತಿಂಗಳ ಹಿಂದೆಯಷ್ಟೆ ನಾನು ಪ್ರಧಾನಿಯ ಮುಖ್ಯ ವೈಜ್ಞಾನಿಕ ಸಲಹೆಗಾರನೆಂಬ ಸಂಪುಟ ದರ್ಜೆಯ ಹುದ್ದೆಯನ್ನು ಬಿಟ್ಟು ಅಧ್ಯಾಪಕ ವೃತ್ತಿಗೆ ಹಿಂತಿರುಗಿದ್ದೆ. ಈಗ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜೊತೆ ಮಾತನಾಡುತ್ತಿದ್ದಂತೆ ನನ್ನ ಜೀವನ ಅನಿರೀಕ್ಷಿತವಾದ ಒಂದು ಬದಲಾವಣೆಗೆ ಸಿದ್ಧವಾಗುವಂತಾಯಿತು.
ಡಾ. ಅಬ್ದುಲ್ ಕಲಾಂ ಅವರ ಹಿಂದಿನ ಕೃತಿ 'ವಿಂಗ್ಸ್ ಆಫ್ ಫಯರ್'. ಪ್ರಸ್ತುತ 'ಟರ್ನಿಂಗ್ ಪಾಯಿಂಟ್ಸ್'ನಲ್ಲಿ ಅವರ ಆಮೇಲಿನ, ನಂಬಲ ಸಾಧ್ಯವಾದ ಜೀವನಗಾಥೆಯಿದೆ. ಕಲಾಂ ಅವರು ಈ ಕೃತಿಯಲ್ಲಿ ತಮ್ಮ ಜೀವನದ ಕೆಲವು ಮಹತ್ವಪೂರ್ಣವಾದ ವಿವಾದಾತ್ಮಕ ವಿಷಯಗಳನ್ನು ಮೊಟ್ಟಮೊದಲ ಬಾರಿ ಚರ್ಚಿಸಿದ್ದಾರೆ. ಈವರೆಗೆ ಅಷ್ಟಾಗಿ ತಿಳಿದಿರದ ಅವರ ವೃತ್ತಿಜೀವನದ ಹಾಗೂ ಅವರು ರಾಷ್ಟ್ರಪತಿಯಾದ ನಂತರದ ಅನುಭವಗಳು ಇಲ್ಲಿ ಹರಳುಗಟ್ಟಿವೆ. ಡಾ. ಕಲಾಂ ಅವರ ಅದ್ವಿತೀಯ ವ್ಯಕ್ತಿತ್ವದ ಬಗೆಗೆ ಅಪೂರ್ವ ಒಳನೋಟಗಳಿರುವ ಈ ಕೃತಿಯಲ್ಲಿ ಮಹಾನ್ ಪರಂಪರೆಯುಳ್ಳ ಒಂದು ದೇಶ ದುಡಿಮೆಯ ಮೂಲಕ, ಸತತ ಪ್ರಯತ್ನದ ಮೂಲಕ, ಆತ್ಮವಿಶ್ವಾಸದ ಮೂಲಕ ಅಪೂರ್ವವಾದುದನ್ನು ಸಾಧಿಸಿ ಹೇಗೆ ಒಂದು ಬೃಹತ್ ರಾಷ್ಟ್ರವಾಗಿ ರೂಪುಗೊಳ್ಳಬಹುದೆಂಬ ಕಾಣ್ಕೆಯಿದೆ. ಹಾಗೆ ನೋಡಿದರೆ ಇದೊಂದು ಮುಂದುವರಿದಿರುವ ಕಥನವಷ್ಟೇ ಅಲ್ಲ, ಭಾರತವನ್ನು ಒಂದು ಅಭಿವೃದ್ಧಿಶೀಲ ರಾಷ್ಟ್ರವಾಗಿ ೨೦೨೦ಕ್ಕೂ ಅದರಾಚೆಗೂ ಕರೆದೊಯ್ಯುವ ವೈಯಕ್ತಿಕ ಹಾಗೂ ಸಾಮೂಹಿಕ ಯಾತ್ರೆಯೂ ಹೌದು.