ಸಾರಾಂಶ

ಇಂಗ್ಲಿಷಿನ essay ಎಂಬುದಕ್ಕೆ ಸಂವಾದಿಯಾಗಿ 'ಪ್ರಬಂಧ'
ಎಂಬ ಪದವನ್ನು ಬಳಸಲಾಗುತ್ತದೆ. ಯಾವುದೇ ವಿಷಯವನ್ನು
ಕುರಿತ ಸರಳ, ಸುಲಭ ಶೈಲಿಯನ್ನು ಒಳಗೊಂಡ ರಚನೆಯನ್ನು
'ಪ್ರಬಂಧ' ಎನ್ನಬಹುದು. ಇದರಲ್ಲಿ ಲೇಖಕನ ಸುಸಂಸ್ಕೃತ ಚಿಂತನೆ,
ಉತ್ತಮ ಅಭಿರುಚಿ, ನಾಗರಿಕ ಸಂವೇದನೆ ಮತ್ತು ದಿನನಿತ್ಯದ
ಅನುಭವಗಳು ದಟ್ಟವಾಗುತ್ತಾ ಹೋಗುತ್ತದೆ.

ಮಕ್ಕಳ ಆಲೋಚನಾಶಕ್ತಿ, ಮಾತನಾಡುವ ಕೌಶಲ್ಯದ ಬೆಳವಣಿಗೆ,
ವಿಷಯಗಳ ಮೇಲೆ ಸರಳವಾಗಿ, ಸ್ವತಃ ಬರೆಯುವ ಮತ್ತು
ಅರ್ಥಮಾಡಿಕೊಳ್ಳುವ ಕೌಶಲ್ಯವನ್ನು ಬೆಳೆಸುವ ಸಲುವಾಗಿ ಹಲವಾರು
ವಿಷಯಗಳನ್ನು ಇಲ್ಲಿ ಸೇರಿಸಲಾಗಿದೆ.

ವಿದ್ಯಾರ್ಥಿಗಳು ಸ್ವತಂತ್ರವಾಗಿ ಪ್ರಬಂಧ ಬರೆಯುವ ಶಕ್ತಿಯನ್ನು,
ಕಾಗುಣಿತ ತಪ್ಪುಗಳಿಲ್ಲದ, ಸುಲಭವೂ, ಸ್ವಷ್ಟವೂ ಆದ ಶುದ್ಧ
ಭಾಷೆಯನ್ನು ಬಳಸುವಲ್ಲಿ ಕುಶಲರಾಗುವಂತೆ ಮಾಡುವ ಉದ್ದೇಶವನ್ನು
ಹೊಂದಿರಬೇಕು. ಅಕ್ಷರಗಳು ದುಂಡಾಗಿ, ಸುಂದರವಾಗಿ, ಲೇಖನ
ಚಿಹ್ನೆಗಳನ್ನು ಒಳಗೊಂಡಿರಬೇಕು. ವಿಷಯವ್ಯಾಪ್ತಿಗಿಂತ ವಿದ್ಯಾರ್ಥಿಗಳ
ಭಾಷಾ ಕೌಶಲ್ಯವನ್ನು ಬೆಳೆಸುವುದಕ್ಕೆ ಹೆಚ್ಚು ಒತ್ತು ನೀಡಬೇಕು.
ಮೂರು ದಶಕಗಳಿಗಿಂತಲೂ ಹೆಚ್ಚು ಶಾಲಾ ಕಾಲೇಜುಗಳಲ್ಲಿ
ಕನ್ನಡವನ್ನು ಬೋಧಿಸಿದ ಶ್ರೀ ಎಂ.ವಿ. ನಾಗರಾಜರಾವ್ ಈ ಎಲ್ಲಾ
ಆಶಯವನ್ನು ಈ ಪ್ರಬಂಧ ಪುಸ್ತಕದಲ್ಲಿ ಸಮರ್ಪಕವಾಗಿ ಹೇಳುವ
ಪ್ರಯತ್ನ ಮಾಡಿದ್ದಾರೆ.

ವಿದ್ಯಾರ್ಥಿಗಳಿಗೆ 100 ಪ್ರಬಂಧಗಳು
ಲೇಖಕರು:
ಎಂ ವಿ ನಾಗರಾಜರಾವ್
ಪ್ರಕಾರ:
ಪ್ರಬಂಧ
ಪ್ರಕಾಶಕರು:
ವಸಂತ ಪ್ರಕಾಶನ
ಆಕಾರ:
1/8 ಡೆಮಿ
ಮುದ್ರಣ:
2014
ರಕ್ಷಾಪುಟ:
---
ಪುಟಗಳು:
188
ಬೆಲೆ:
80 ರೂ.
ಲೇಖಕರ ಪರಿಚಯ
ಲೇಖಕರ ಪರಿಚಯ : ಕನ್ನಡದ ಹಿರಿಯ ಸಾಹಿತಿಗಳೂ ಪ್ರಕಾಶಕರೂ ಮಕ್ಕಳ ಸಾಹಿತ್ಯ ಲೋಕಕ್ಕೆ ವಿಶೇಷ ಕೊಡುಗೆಗಳನ್ನು ನೀಡಿರುವವರೂ ಆದ ನಿವೃತ್ತ ಪ್ರಾಚಾರ್ಯ ಎಂ.ವಿ. ನಾಗರಾಜರಾವ್ ಅವರು ಹುಟ್ಟಿದ್ದು ೧೯೪೧ರಲ್ಲಿ, ಚಿಕ್ಕನಾಯಕನಹಳ್ಳಿಯಲ್ಲಿ. ತಂದೆ ಎಂ.ಆರ್. ವೆಂಕಟರಾಮಯ್ಯ; ತಾಯಿ ಟಿ.ಆರ್. ಸಂಜೀವಮ್ಮ. ರಾಯರು ಎಂ.ಎ. (ಕನ್ನಡ), ಎಂ.ಎ. (ಹಿಂದಿ), ಬಿ.ಇಡಿ ಪದವೀಧರರು. ಅಲ್ಲದೆ ಸಾಹಿತ್ಯ ರತ್ನ, ರಾಷ್ಟ್ರಭಾಷಾ ವಿಶಾರದ, ರಾಷ್ಟ್ರಭಾಷಾ ಪ್ರವೀಣ, ರಾಜಭಾಷಾ ವಿದ್ವಾನ್, ಹಿಂದಿ ರತ್ನ, ಹಿಂದಿ ಭಾಷಾ ಪ್ರವೀಣ ವಿದ್ಯಾರ್ಹತೆಗಳನ್ನು ಪಡೆದವರು. ರಾಯರದು ಭಾಷಾಂತರವೂ ಸೇರಿದಂತೆ ಗುಣಮಟ್ಟದ ವಿಪುಲ ಸಾಹಿತ್ಯ ರಚನೆ. ಅವರ ಐವತ್ತೆರಡಕ್ಕೂ ಹೆಚ್ಚು ಕಾದಂಬರಿಗಳು ಪ್ರಕಟವಾಗಿವೆ. ಇವುಗಳಲ್ಲಿ ಕೆಲವೆಂದರೆ: ಕಂಪನ, ಅಘೋರಿಗಳ ನಡುವೆ, ನಲ್ಲ ಅಪರಾಧಿ ನಾನಲ್ಲ, ವಿಶ್ವಬಾಹು ಪರಶುರಾಮ, ಜೇಮ್ಸ್ ಹ್ಯಾಡ್ಲಿ ಚೇಸ್‌ನನ್ನು ಅನುವಾದಿಸಿ ತಂದ ನೆಲವೆಲ್ಲಾ ಕಿವಿ, ಮೃತ್ಯುಬಂಧನ, ರಕ್ತದೋಕುಳಿ, ಹಿಂದಿಯಿಂದ ಕನ್ನಡಕ್ಕೆ ತಂದ ಡಾ. ನರೇಂದ್ರ ಕೊಹಿಲಿಯವರ ರಾಮಾಯಣ ಆಧಾರಿತ ಏಳು ಕಾದಂಬರಿಗಳೂ ಸೇರಿವೆ. ಮಕ್ಕಳ ಸಾಹಿತ್ಯ ಲೋಕದಲ್ಲಂತೂ ರಾಯರ ಸೇವೆ ವಿಶಿಷ್ಟ ಬಗೆಯದು: ವಿಜ್ಞಾನದ ಅದ್ಭುತಗಳು, ಸೊಹ್ರಾಬ್ ಮತ್ತು ರುಸ್ತುಂ, ಕ್ರೀಡೆಗಳು, ಸಿಕ್ಕಿಂ ಕಥೆಗಳು, ಬರ್ಮಾದ ಕಥೆಗಳು, ದೇಶ-ವಿದೇಶಗಳ ಮಕ್ಕಳ ಕಥೆಗಳು, ವಿಶ್ವವಿಖ್ಯಾತ ಲೇಖಕರ ಕೃತಿಗಳು, ರಾಮಾಯಣ ಕ್ವಿಜ್, ಮಹಾಭಾರತ ನಿಮಗೆಷ್ಟು ಗೊತ್ತು?, ಐತಿಹಾಸಿಕ ಏಕಾಂಕ ನಾಟಕಗಳು, ೧೦೦ ಕಥೆ ನೂರಾರು ನೀತಿ, ಕನ್ನಡ ವ್ಯಾಕರಣ ದರ್ಪಣ, ತತ್ಸಮ-ತದ್ಭವ ಕೋಶ, ವಿದ್ಯಾರ್ಥಿ ಮಿತ್ರ ಮೊದಲಾದ ಬಹು ಸಂಖ್ಯೆಯ ಕೃತಿಗಳು. ಇತ್ತೀಚೆಗೆ ವಸಂತ ಪ್ರಕಾಶನವು ಪ್ರಾರಂಭಿಸಿರುವ ಜಗದ್ವಿಖ್ಯಾತ ಕೃತಿಗಳ ಸಂಕ್ಷಿಪ್ತ ರೂಪವನ್ನು ಮಕ್ಕಳಿಗಾಗಿ ಕನ್ನಡದಲ್ಲಿ ತಂದುಕೊಡುವ ‘ಮಕ್ಕಳಿಗಾಗಿ ಲೋಕವಿಖ್ಯಾತ ಕೃತಿಗಳು’ ಮಾಲೆಯಡಿ ಜೂಲ್ಸ್‌ವರ್ನ್‌ನ ‘೮೦ ದಿನಗಳಲ್ಲಿ ವಿಶ್ವಪರ್ಯಟನೆ’, ಲಿವೀಸ್ ಕೆರಾಲ್‌ನ ‘ಜಾದೂ ನಗರ’, ಸರ್ವಾಂಟಶ್ ಸಾವೇದ್ರಾನ ‘ಯುದ್ಧವೀರನ ಹಾಸ್ಯಪ್ರಸಂಗಗಳು’ ಮತ್ತು ರಾಬರ್ಟ್ ಲೂಯಿಸ್ ಸ್ಟೀವನ್‌ಸನ್‌ನ ‘ಗುಪ್ತನಿಧಿ’ ಕೃತಿಗಳು ಪ್ರಕಟಗೊಂಡಿವೆ. ಅನೇಕ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿರುವ ರಾಯರು ಐದು ಬಾರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿ ಸೇವೆ ಸಲ್ಲಿಸಿದ್ದಾರೆ. ಅಂತಾರಾಷ್ಟ್ರೀಯ ರೋಟರಿ ಸೇವಾ ಸಂಸ್ಥೆಯ ಮುಖಾಂತರ ರಕ್ತದಾನ ಶಿಬಿರ, ನೇತ್ರ ಪರೀಕ್ಷೆ ಮೊದಲಾದ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಯಶಸ್ವಿಯಾಗಿ ತೊಡಗಿ ಕೊಳ್ಳುವುದು ಅವರ ಹವ್ಯಾಸದಂತೆಯೇ ಆಗಿದೆ. ಇದಲ್ಲದೆ ಇನ್ನೂ ಅನೇಕ ಸಂಘ-ಸಂಸ್ಥೆಗಳಲ್ಲಿ ಒಡನಾಟವನ್ನಿಟ್ಟುಕೊಂಡಿದ್ದಾರೆ. ಹಾಸನದಲ್ಲಿ ನಡೆದ ೬೭ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿತರಾಗಿರುವ ನಾಗರಾಜ್‌ರಾವ್ ಅವರು ಅಮೆರಿಕದ ಮಿಲ್ಟಿಟಾಸ್ ಕನ್ನಡ ಸಂಘವೂ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳಿಂದಲೂ ಗೌರವಾದರಗಳನ್ನು ಪಡೆದಿದ್ದಾರೆ; ಚಿಕ್ಕನಾಯಕನಹಳ್ಳಿ ತಾಲ್ಲೂಕು ೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠವನ್ನೂ ಅಲಂಕರಿಸಿದ್ದಾರೆ; ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದಾರೆ.