ಕೇವಲ ಸ್ಮರಣಶಕ್ತಿಯ ಪ್ರದರ್ಶನವಲ್ಲ, ಜ್ಞಾನದ ಅಗಾಧ ಸಾಗರವನ್ನೇ ಮೈಗೂಡಿಸಿಕೊಂಡಿರುವ ಅಪರೂಪದ ವ್ಯಕ್ತಿತ್ವ ಶತಾವಧಾನಿ ಡಾ. ಆರ್. ಗಣೇಶ್. ನಮ್ಮ ಕನ್ನಡ ನಾಡಿನ ಹೆಮ್ಮೆಯ ವಿದ್ವಾಂಸ, ಅಪ್ರತಿಮ ಮೇಧಾವಿ ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ 2026 ನೇ ಸಾಲಿನ ದೇಶದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ.
ಕಣ್ಮರೆಯಾಗುತ್ತಿದ್ದ ಅವಧಾನ ಕಲೆಯನ್ನು ಕನ್ನಡ ಮತ್ತು ಸಂಸ್ಕೃತದಲ್ಲಿ ಮರುಸ್ಥಾಪಿಸಿ, ಅದಕ್ಕೆ ಹೊಸ ಆಯಾಮ ನೀಡಿದ ಹಾಗೂ ಸಾವಿರಕ್ಕೂ ಹೆಚ್ಚು ಅಷ್ಟಾವಧಾನಗಳನ್ನು ಹಾಗೂ ಅನೇಕ ಶತಾವಧಾನಗಳನ್ನು ಯಶಸ್ವಿಯಾಗಿ ನೆರವೇರಿಸಿದ ಕೀರ್ತಿ ಇವರದ್ದು.
ಡಿಸೆಂಬರ್ 4, 1962 ರಂದು ಕೋಲಾರ ಜಿಲ್ಲೆಯಲ್ಲಿ ಜನಿಸಿದ ಇವರು ಮೂಲತಃ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರು. ನಂತರ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿ. ಎಚ್. ಡಿ. ಪಡೆದು ವೃತ್ತಿಯಿಂದ ಅಧ್ಯಾಪಕರಾಗಿದ್ದವರು. ಹೀಗೆ ವಿಜ್ಞಾನ ಮತ್ತು ಸಾಹಿತ್ಯ ಎರಡು ಕ್ಷೇತ್ರದಲ್ಲಿ ಇವರ ಹೆಸರಿದೆ. ಬಾಲ್ಯದಿಂದಲೇ ಸಾಹಿತ್ಯದ ಒಲವಿನಿಂದ ಶಾಸ್ತ್ರ, ತತ್ವಶಾಸ್ತ್ರ, ಸಂಗೀತ, ನೃತ್ಯ ಮುಂತಾದ ಹಲವು ವಿಷಯಗಳಲ್ಲಿ ಆಸಕ್ತಿ ಹೊಂದಿದ್ದಾರೆ.
ಭಾರತೀಯ ಭಾಷೆಗಳಾದ ಕನ್ನಡ, ಸಂಸ್ಕೃತ, ತೆಲುಗು, ತಮಿಳು, ಹಿಂದಿ, ಪಾಳಿ, ಮರಾಠಿ,ಬಂಗಾಳಿ ಮುಂತಾದುವುಗಳಲ್ಲದೇ ವಿದೇಶೀಯ ಭಾಷೆಗಳಾದ ಇಂಗ್ಲೀಷ್, ಗ್ರೀಕ್, ಲ್ಯಾಟಿನ್, ಇಟಾಲಿಯನ್ ಸೇರಿದಂತೆ 18ಕ್ಕೂ ಹೆಚ್ಚು ಭಾಷೆಗಳಲ್ಲಿ ಅಪಾರ ಪರಿಣತಿ ಹೊಂದಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ಅವಧಾನ ಕಲೆಯಲ್ಲಿ ತೋರಿದ ಅದ್ಭುತ ಅಸಕ್ತಿಕ್ಕಾಗಿ ರಾಷ್ಟ್ರೀಯ ಯುವ ಪ್ರತಿಭಾ ಪುರಸ್ಕಾರ ಪಡೆದುಕೊಂಡರು. ತಮ್ಮ 29ನೇ ವಯಸ್ಸಿನಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆಯುವ ಮೂಲಕ, ನಾಡಿನ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾದ ಅತ್ಯಂತ ಕಿರಿಯ ಸಾಧಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2021 ರಲ್ಲಿ ಮಹಾಬ್ರಾಹ್ಮಣ’ ಕೃತಿಯ ಅನುವಾದಕ್ಕಾಗಿ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಯ ಗೌರವ ಸೇರಿದಂತೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಇವರ “ಕನ್ನಡದಲ್ಲಿ ಅವಧಾನ ಕಲೆ” ಎಂಬ ಮಹಾಪ್ರಬಂಧಕ್ಕೆ ಡಿ.ಲಿಟ್ ಪದವಿ ಹಾಗೂ ತುಮಕೂರು ವಿಶ್ವವಿದ್ಯಾಲಯದಿಂದಲೂ ಗೌರವ ಡಾಕ್ಟರೇಟ್ ಸಂದಿದೆ. ಹೀಗೆ ಇವರ ಅಗಾಧ ಜ್ಞಾನಕ್ಕೆ ಅನೇಕ ಗೌರವ ಪ್ರಶಸ್ತಿಗಳು ಅರಸಿ ಬಂದಿವೆ.
ವೇದಿಕೆಯ ಮೇಲೆ ಪದ್ಯಗಳನ್ನು ರಚಿಸುವುದರ ಜೊತೆಗೆ ತಮ್ಮ ಲೇಖನದ ಮೂಲಕ ನೂರಾರು ಮೌಲ್ಯಯುತ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಕನ್ನಡ, ಸಂಸ್ಕೃತ ಹಾಗೂ ತೆಲುಗು ಸಾಹಿತ್ಯ, ತತ್ವಶಾಸ್ತ್ರ, ನೀತಿಶಾಸ್ತ್ರ, ಅಲಂಕಾರ ಶಾಸ್ತ್ರ, ವಿಮರ್ಶೆ,ಯಕ್ಷಗಾನ, ನೃತ್ಯ, ತಂತ್ರಜ್ಞಾನ, ವಿಜ್ಞಾನ ಮುಂತಾದ ವಿಷಯಗಳಿಗೆ ಸಂಬಂಧಪಟ್ಟ ವಿರಳ ವಿಷಯಗಳ ಬಗ್ಗೆ ಅನೇಕ ಸಂಶೋಧನಾ ಲೇಖನಗಳನ್ನು ಮಂಡಿಸಿದ್ದಾರೆ.
ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಗೆ 2026ನೇ ಸಾಲಿನ ರಾಷ್ಟ್ರ ಮಟ್ಟದ ಪದ್ಮ ಭೂಷಣ ಗೌರವ ಘೋಷಿಸಲಾಗಿದೆ. ವಿದ್ವತ್ ಪರಂಪರೆಯ ಗಣಿ ಡಾ. ಆರ್. ಗಣೇಶ್ ನಮ್ಮ ಕನ್ನಡ ನಾಡಿನವರು ಎನ್ನುವುದು ಹೆಮ್ಮೆಯ ಸಂಗತಿ.
ಡಾ. ಆರ್. ಗಣೇಶ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ಇವರ ಜ್ಞಾನದ ಹರಿವು ನಿರಂತರವಾಗಿರಲಿ ಎನ್ನುವುದೇ ನಮ್ಮ ಆಶಯ.
