A book is a dream you hold in your hands

ಯುಗಾದಿಹಬ್ಬ : ಕನ್ನಡ ಸಾಹಿತ್ಯದಲ್ಲಿಅರಳಿದ ಪ್ರಕೃತಿಯ ಹೊಸಚೈತನ್ಯ

ಯುಗಾದಿ ಹಬ್ಬ ಹೊಸತನವನ್ನು ಸೂಚಿಸುವ ಹಬ್ಬ.ವಸಂತ ಋತು ಬರುವ ವೇಳೆಗೆ ಮರ ಗಿಡಗಳಲ್ಲಿ ಹೊಸ ಎಲೆಗಳು ಚಿಗುರುತ್ತವೆ, ಹೂಗಳು ಅರಳುತ್ತವೆ ಮತ್ತು ಪ್ರಕೃತಿಯಲ್ಲೆಲ್ಲ ಹೊಸ ಜೀವಂತಿಕೆ ಕಾಣಿಸುತ್ತದೆ. ಪ್ರಕೃತಿಯ ಪರಿವರ್ತನೆ ನಮ್ಮ ಮನಸ್ಸಿನಲ್ಲಿಯೂ ಹೊಸ ಚೈತನ್ಯ  ಮತ್ತು ಹೊಸ ಸ್ಫೂರ್ತಿ ಹುಟ್ಟಿಸುತ್ತದೆ

ನಮ್ಮ ಸುತ್ತಲಿನ ಪ್ರಕೃತಿ ಕನ್ನಡ ಸಾಹಿತ್ಯದಲ್ಲಿ ಸದಾ ಪ್ರಮುಖವಾದ ಪಾತ್ರವಹಿಸಿದೆ. ಆನೇಕರ ಬರವಣಿಗೆಗೆ ಪ್ರಕೃತಿ ಪ್ರೇರಣೆಯಾಗಿದೆ. ಅನೇಕ ಕವಿಗಳು ಮತ್ತು ಲೇಖಕರು ಪ್ರಕೃತಿಯ ಸೌಂದರ್ಯವನ್ನು ತಮ್ಮ ಕೃತಿಗಳಲ್ಲಿ ಉಲ್ಲೇಖಸಿದ್ದಾರೆ.

ಕನ್ನಡ ಸಾಹಿತ್ಯದಲ್ಲಿ  ಪ್ರಕೃತಿ ಭಾವನೆಗಳ ಪ್ರತಿರೂಪವಾಗಿದೆ. ರಾಷ್ಟ್ರಕವಿ ಕುವೆಂಪು ಅವರ ಕೃತಿಗಳಲ್ಲಿ ಪ್ರಕೃತಿ ಮತ್ತು ಮನುಷ್ಯನ ಸುಂದರ ಸಂಬಂಧ ಕಾಣುತ್ತದೆ. ಅವರ ಸಾಹಿತ್ಯದಲ್ಲಿ ಮಲೆನಾಡಿನ ಪ್ರಕೃತಿ, ಕಾಡುಗಳು, ನದಿಗಳು ಮತ್ತು ಹೂಗಳ ಸೌಂದರ್ಯ ಅತ್ಯಂತ ಜೀವಂತವಾಗಿ ಮೂಡಿಬಂದಿದೆ.

ಅದೇ ರೀತಿಯಲ್ಲಿ ದ. ರಾ. ಬೇಂದ್ರೆ ಅವರ ಕವಿತೆಗಳಲ್ಲಿ ಪ್ರಕೃತಿಯನ್ನು ಭಾವನೆಯ ರೂಪಕವಾಗಿ ಉಲ್ಲೇಖಿಸಲಾಗಿದೆ. ಹೂಗಳು, ಮರಗಳು, ಗಾಳಿ ಮತ್ತು ಋತುಗಳ ಬದಲಾವಣೆಗಳ ಮೂಲಕ ಬೇಂದ್ರೆ ಅವರು ಮಾನವ ಜೀವನದ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ.

ಕನ್ನಡದ ಕಥಾಸಾಹಿತ್ಯದಲ್ಲಿ ಪ್ರಕೃತಿ ಪ್ರಮುಖ ಪಾತ್ರವಹಿಸುತ್ತದೆ. ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕೃತಿಗಳಲ್ಲಿ ಮಲೆನಾಡಿನ ಪ್ರಕೃತಿಯನ್ನು ಕೇಂದ್ರವಾಗಿ ಇಟ್ಟುಕೊಂಡು ಕಥೆ ಹೆಣೆಯಲಾಗಿದೆ.ಕಾಡು, ಮಳೆ, ಪ್ರಾಣಿ–ಪಕ್ಷಿಗಳು ಮತ್ತು ಗ್ರಾಮೀಣ ಜೀವನದ ನಿಕಟ ಸಂಬಂಧವನ್ನು ಅವರು ತಮ್ಮ ಕಥೆಗಳಲ್ಲಿ ಅದ್ಭುತವಾಗಿ ಚಿತ್ರಿಸಿದ್ದಾರೆ

ಡಾ. ಬಿ. ಜಿ. ಎಲ್. ಸ್ವಾಮಿಯವರ ಬರಹಗಳಲ್ಲಿ ಪ್ರಕೃತಿಯ ವೈಜ್ಞಾನಿಕ ವಿಶ್ಲೇಷಣೆ ಮತ್ತು ಸಾಹಿತ್ಯಿಕ ಸೌಂದರ್ಯ ಎರಡೂ ಕಾಣುತ್ತವೆ. ಮರಗಳನ್ನು ಮತ್ತು ಸಸ್ಯಗಳ ಲೋಕವನ್ನು ಅವರು ಸಾಹಿತ್ಯದ ಮೂಲಕ ಸ್ವಾರಸ್ಯಕರವಾಗಿ ಓದುಗರಿಗೆ ಪರಿಚಯಿಸಿದ್ದಾರೆ. ನಮ್ಮ ಸುತ್ತಲಿನ ಪ್ರಕೃತಿ, ಗಿಡ, ಮರಗಳ ಬಗ್ಗೆ  ತಿಳಿದುಕೊಳ್ಳುವುದಕ್ಕೆ ಒಂದು ಉತ್ತಮ ಪುಸ್ತಕ ಡಾ. ಬಿ.ಜಿ.ಎಲ್. ಸ್ವಾಮಿ ಅವರ ಹಸುರು ಹೊನ್ನು.

ಕನ್ನಡ ಸಾಹಿತ್ಯದಲ್ಲಿ ಪ್ರಕೃತಿಯನ್ನು ವರ್ಣಿಸುವುದರ ಜೊತೆ ಪ್ರಕೃತಿಯೊಂದಿಗೆ ನಮ್ಮ ಆಳವಾದ ಸಂಬಂಧವನ್ನು ವ್ಯಕ್ತಪಡಿಸಲಾಗಿದೆ. ವಸಂತದ ಚೈತನ್ಯವನ್ನು ಅನುಭವಿಸುತ್ತಾ, ಪ್ರಕೃತಿಯ ಸೌಂದರ್ಯವನ್ನು ಚಿತ್ರಿಸುವ ಕನ್ನಡ ಸಾಹಿತ್ಯವನ್ನು ಓದುವ ಮೂಲಕ ಯುಗಾದಿ ಹಬ್ಬದ ಸಂಭ್ರಮ ಮತ್ತಷ್ಟು ಅರ್ಥ ಪೂರ್ಣವಾಗಲಿ.

ಪ್ರಕೃತಿಯ ಸೊಬಗಿನ ಅನುಭವನ್ನು ಸಾಹಿತ್ಯದ ಮೂಲಕ ಪಡೆಯಿರಿ. ವಸಂತ ಪ್ರಕಾಶನದ ಕಡೆಯಿಂದ ಯುಗಾದಿ ಹಬ್ಬದ ಶುಭಾಶಯಗಳು. ಪ್ರಕೃತಿಯಲ್ಲಿನ ಬದಲಾವಣೆ ನಮ್ಮ ಜೀವನದಲ್ಲಿ ಹೊಸ ಚೈತನ್ಯ ನೀಡಲಿ.

Share :