ಪುಸ್ತಕಗಳೇ ಕಣ್ಮರೆ ಆಗುತ್ತಿರುವ ಇಂದಿನ ಡಿಜಿಟಲ್ ಯುಗದಲ್ಲಿ ವ್ಯಕ್ತಿ ಒಬ್ಬರ ಪುಸ್ತಕ ಪ್ರೇಮಕ್ಕೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಮೂಲತಃ ಮಂಡ್ಯದ ಎಂ. ಅಂಕೇಗೌಡರ ಪುಸ್ತಕ ಸಂಗ್ರಹಣೆಯ ಹವ್ಯಾಸ ಇಂದು ಬೃಹತ್ ಗ್ರಂಥಾಲಯವಾಗಿ ನಿಂತಿದೆ. ಮಂಡ್ಯ ಜಿಲ್ಲೆಯ ಪಾಂಡವಪುರದ ಹರಳಹಳ್ಳಿಯಲ್ಲಿರುವ ಪುಸ್ತಕ ಮನೆಯಲ್ಲಿ ಇಂದು ಇಪ್ಪತ್ತು ಲಕ್ಷಕ್ಕೂ ಹೆಚ್ಚು ಪುಸ್ತಕಗಳ ಜೊತೆ 100 ವರ್ಷಗಳಷ್ಟು ಹಳೆಯ ದಿನಪತ್ರಿಕೆಗಳ, ವಿಭಿನ್ನ ನಾಣ್ಯಗಳ ಮತ್ತು ಅಪರೂಪದ ಅಂಚೆ ಚೀಟಿಗಳ ಅಪರೂಪದ ಸಂಗ್ರಹವಿದೆ.
ವೃತ್ತಿಯಲ್ಲಿ ಬಸ್ ಕಂಡಕ್ಟರ್ ಆಗಿದ್ದ ಎಂ. ಅಂಕೇಗೌಡರು ಆರಂಭದಲ್ಲಿ ಮನೆಯ ಪುಟ್ಟ ಕೋಣೆಯೊಂದರಲ್ಲಿ ಪುಸ್ತಕಗಳನ್ನು ಸಂಗ್ರಹಿಸಲು ಶುರು ಮಾಡಿ ತಮ್ಮ ಸಂಬಳದಿಂದ ‘ಪುಸ್ತಕ ಮನೆ’ ಎಂಬ ಗ್ರಂಥಾಲಯವನ್ನು ಆರಂಭಿಸುತ್ತಾರೆ.
ಮೈಸೂರು ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಂಡಕ್ಟರ್ ಆಗಿ ಕೆಲಸಕ್ಕೆ ಸೇರಿ ನಂತರ ಸಂಜೆ ಕಾಲೇಜಿನಿಂದ ಬಿ.ಎ. ಪದವಿ ಹಾಗೂ ಕನ್ನಡದಲ್ಲಿ ಎಂ.ಎ. ಪದವಿ ಪಡೆದರು. ಸಕ್ಕರೆ ಕಾರ್ಖಾನೆಯಲ್ಲಿ ವೇಳಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಎಂ. ಅಂಕೇಗೌಡ ತಮಗೆ ಬರುತ್ತಿದ್ದ ಅಲ್ಪ ಸಂಬಳದ ಬಹು ಪಾಲನ್ನು ಪುಸ್ತಕಗಳಿಗಾಗಿ ಮೀಸಲಿಡುತ್ತಿದ್ದರು.
ಸಣ್ಣ ಸಣ್ಣ ಪುಸ್ತಕ ಖರೀದಿಯಿಂದ ಆರಂಭಗೊಂಡ ಇವರ ಸಂಗ್ರಹಣೆ ಕೊನೆಗೆ ಮನೆಯಲ್ಲಿ ಜಾಗವಿಲ್ಲದಷ್ಟು ಪುಸ್ತಕಗಳು ಬಂದು ಸೇರಿದವು. ಇದನ್ನು ಮನಗಂಡ ಉದ್ಯಮಿ ಒಬ್ಬರು ದೊಡ್ಡ ಕಟ್ಟಡವನ್ನು ನಿರ್ಮಿಸಿಕೊಟ್ಟರು. ಅಂಕೇಗೌಡ ಜ್ಞಾನ ಪ್ರತಿಷ್ಠಾನದ ಅಡಿಯಲ್ಲಿ ಈ ಗ್ರಂಥಾಲಯಕ್ಕೆ ‘ಪುಸ್ತಕದ ಮನೆ’ ಎಂದು ಹೆಸರಿಡಲಾಯಿತು. ಈ ಕಾರ್ಯದಲ್ಲಿ ಅವರ ಪತ್ನಿ ವಿಜಯಲಕ್ಷ್ಮಿ ಸಂಪೂರ್ಣ ಸಹಕಾರವಿದೆ.
ಇಂದು ಗ್ರಾಮೀಣ ಪ್ರದೇಶದಲ್ಲಿ ಶುಲ್ಕವಿಲ್ಲದೆ ಜ್ಞಾನವನ್ನು ಹಂಚುವ ಪುಸ್ತಕಗೆ ದೇಶ – ವಿದೇಶಗಳಿಂದ ಸಂಶೋಧಕರು, ಸಾಹಿತಿಗಳು, ವಿದ್ಯಾರ್ಥಿಗಳು ಹಾಗೂ ಪುಸ್ತಕ ಪ್ರೇಮಿಗಳು ಭೇಟಿ ನೀಡಿ ಅಂಕೇಗೌಡರ ಸಂಗ್ರಹಣೆ ಕಂಡು ಬೆರಗಾಗುತ್ತಿದ್ದಾರೆ. ಸಂಶೋಧಕರಿಗೆ ಅಂಕೇಗೌಡರ ಈ ಪುಸ್ತಕ ಸಂಗ್ರಹ ಅತ್ಯುತ್ತಮ ಸಂಪನ್ಮೂಲವಾಗಿದೆ.
2016ರಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ ‘ವೈಯಕ್ತಿಕವಾಗಿ ಅತಿ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿದ ವ್ಯಕ್ತಿ” (Largest Personal Book Collection) ಎಂದು ಗುರುತಿಸಿ ಗೌರವಿಸಲಾಗಿತ್ತು ಹಾಗೆ 2014 ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು.
ಇದೀಗ 2026 ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಎಂ. ಅಂಕೇಗೌಡ ಆಯ್ಕೆ ಆಗಿರುವುದು ಹೆಮ್ಮೆಯ ಸಂಗತಿ. ಮೊಬೈಲ್ ಸ್ಕ್ರೀನ್ ನಲ್ಲಿ ಮುಳುಗಿ ಪುಸ್ತಕಗಳನ್ನು ಮರೆತು ಹೋಗಿರುವ ಇಂದಿನ ಯುವ ಜನತೆಗೆ ಅಂಕೇಗೌಡರ ಪುಸ್ತಕ ಪ್ರೇಮ ನಿಜಕ್ಕೂ ಪ್ರೇರಣಾದಾಯಕವಾಗಿದೆ.

