A book is a dream you hold in your hands

ವಿಶ್ವ ಮಹಿಳಾ ದಿನಾಚರಣೆ :ಕನ್ನಡ ಸಾಹಿತ್ಯದಲ್ಲಿ ಪ್ರಮುಖ ಮಹಿಳಾ ಲೇಖಕಿಯರು

ಕನ್ನಡ ಸಾಹಿತ್ಯದಲ್ಲಿ ಮಹಿಳಾ ಲೇಖಕಿಯರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ತಮ್ಮ ಅನುಭವಗಳು, ಭಾವನೆಗಳು, ಸಮಾಜದ ಸಮಸ್ಯೆಗಳು ಮತ್ತು ಮಹಿಳೆಯರ ಜೀವನದ ವಿವಿಧ ಆಯಾಮಗಳನ್ನು ತಮ್ಮ ಬರಹಗಳ ಮೂಲಕ ವ್ಯಕ್ತಪಡಿಸಿದ ಅನೇಕ ಲೇಖಕಿಯರು ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ಕಥೆ, ಕಾದಂಬರಿ, ಕಾವ್ಯ, ಪ್ರಬಂಧಗಳ ಮೂಲಕ ಮಹಿಳಾ ಧ್ವನಿಯನ್ನು ಸಾಹಿತ್ಯದಲ್ಲಿ ಬಲವಾಗಿ ಎತ್ತಿ ಹಿಡಿದಿದ್ದಾರೆ.

ವಚನ ಸಾಹಿತ್ಯದಿಂದ ಆರಂಭಗೊಂಡು ಇಂದಿನ ಸಮಕಾಲೀನ ಸಾಹಿತ್ಯದಲ್ಲಿ ಮಹಿಳಾ ಲೇಖಕಿಯರು ಸಮಾಜದ ಬದಲಾವಣೆ, ಮಹಿಳೆಯರ ಹೋರಾಟಗಳು, ಸಂಬಂಧಗಳ ಸೂಕ್ಷ್ಮತೆ ಹಾಗೂ ಜೀವನ ಮೌಲ್ಯಗಳನ್ನು ತಮ್ಮ ಕೃತಿಗಳ ಮೂಲಕ ಪರಿಚಯಿಸಿದ್ದಾರೆ. ಅವರ ಬರಹಗಳು ಕೇವಲ ಸಾಹಿತ್ಯಿಕ ಅಭಿವ್ಯಕ್ತಿಯಲ್ಲ, ಸಮಾಜದ ಚಿಂತನೆಗೆ ದಾರಿ ತೋರಿಸುವ ಮಹತ್ವದ ಸಾಧನಗಳಾಗಿವೆ.

ಕನ್ನಡ ಸಾಹಿತ್ಯ ಲೋಕದ ಕೆಲವು ಪ್ರಮುಖ ಕನ್ನಡ ಮಹಿಳಾ ಲೇಖಕಿಯರ ಕಿರುಪರಿಚಯ ಇಲ್ಲಿದೆ

ಅಕ್ಕ ಮಹಾದೇವಿ

12ನೇ ಶತಮಾನದ ಅಕ್ಕ ಮಹಾದೇವಿ ಕನ್ನಡದ ಮೊದಲ ಮಹಿಳಾ ಕವಯಿತ್ರಿ.ಬಾಲ್ಯದಿಂದಲೇ ಶಿವಭಕ್ತೆಯಾದ ಅಕ್ಕ ಮಹಾದೇವಿ ಶರಣ ಚಳವಳಿಯಲ್ಲಿ ಲಿಂಗಭೇದವಿಲ್ಲದ ಸಮಾನತೆಯನ್ನು ಪ್ರತಿಪಾದಿಸಿದ್ದಾರೆ ನೇರ ಹಾಗೂ ಅರ್ಥಪೂರ್ಣ ಸಾಹಿತ್ಯದ ಮೂಲಕ ವಚನ ಚಳವಳಿಯ ಪ್ರಮುಖ ಧ್ವನಿಯಾಗಿದ್ದಾರೆ.

ಕೊಡಗಿನ ಗೌರಮ್ಮ

ಕನ್ನಡ ಸಾಹಿತ್ಯದ ಆರಂಭಿಕ ಮಹಿಳಾ ಕಥೆಗಾರ್ತಿ. ಕೊಡಗಿನ ಮಹಿಳೆಯರ ಸ್ಥಿತಿ, ಸಮಾಜದ ಕಟ್ಟುಪಾಡುಗಳನ್ನು, ಮಹಿಳೆಯ ಸ್ವಾತಂತ್ರ್ಯ, ಶಿಕ್ಷಣ ಮತ್ತು ಸ್ವಾಭಿಮಾನವನ್ನು ಕೇಂದ್ರವಾಗಿಟ್ಟುಕೊಂಡು ಬರೆದಿದ್ದಾರೆ. ತಮ್ಮ ಕೃತಿಗಳಲ್ಲಿ ಬಾಲ್ಯವಿವಾಹ, ಲಿಂಗಭೇದ, ಶಿಕ್ಷಣದ ಕೊರತೆಯ ಬಗ್ಗೆ ಧ್ವನಿ ಎತ್ತಿದ್ದಾರೆ

ತ್ರಿವೇಣಿ

ತ್ರಿವೇಣಿ ಎಂಬ ಕಾವ್ಯನಾಮದೊಂದಿಗೆ ಅನಸುಯಾ ಶಂಕರ್ ಕನ್ನಡದಲ್ಲಿ ಮನೋವೈಜ್ಞಾನಿಕ ಕಾದಂಬರಿಗಳನ್ನು ಪರಿಚಯಿಸಿದವರು.ತಮ್ಮ ಕೃತಿಗಳಲ್ಲಿ ಮಧ್ಯಮವರ್ಗದ ಮಹಿಳೆಯರ ಮನಸ್ಥಿತಿಯನ್ನು ಅಚ್ಚುಕಟ್ಟಾಗಿ ಚಿತ್ರಿಸಿದ್ದಾರೆ.

ಮಹಿಳಾ ಮನಸ್ಸಿನ ತಲ್ಲಣಗಳನ್ನು ಸಾಹಿತ್ಯದ ವಿಷಯವನ್ನಾಗಿಸುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.

ಸಾರಾ ಅಬೂಬಕ್ಕರ್

ಸಾರಾ ಅಬೂಬಕ್ಕರ್  ತಮ್ಮ ಕೃತಿಗಳ ಮೂಲಕ ಸಂಸ್ಕೃತಿ ಮತ್ತು ಸಮಾಜದ ನಡುವಿನ ಹೆಣ್ಣಿನ ಹೋರಾಟಕ್ಕೆ ಧ್ವನಿಯಾಗಿದ್ದಾರೆ.ಇವರ ಕೃತಿಗಳು ಸಾಮಾಜಿಕ ಸತ್ಯದ ದಾಖಲೆಗಳಂತೆ ಕಾಣಿಸುತ್ತವೆ. ಮುಸ್ಲಿಂ ಸಮುದಾಯದ ಮಹಿಳೆಯರ ಶೋಷಣೆ, ತಲಾಕ್ ಸಂಪ್ರದಾಯದ ದುಷ್ಪರಿಣಾಮಗಳ ಕುರಿತು ದಿಟ್ಟವಾಗಿ ತಮ್ಮ ಕಾದಂಬರಿಗಳಲ್ಲಿ ಉಲ್ಲೇಖಿಸಿದ್ದಾರೆ.

ಅನುಪಮ ನಿರಂಜನ

ಕನ್ನಡ ಸಾಹಿತ್ಯದಲ್ಲಿ ಸಮಾಜಮುಖಿ ಧ್ವನಿಯಾಗಿ ಹೊರಹೊಮ್ಮಿದರು. ವೈದ್ಯಕೀಯ ವೃತ್ತಿಯಲ್ಲಿ ಮಹಿಳೆಯ ದೇಹ, ಆರೋಗ್ಯ ಮತ್ತು ಸಾಮಾಜಿಕ ಪರಿಸ್ಥಿತಿಗಳನ್ನು ಸಮೀಪದಿಂದ ನೋಡಿದ ಅನುಭವವನ್ನು ಅವರ ಸಾಹಿತ್ಯದಲ್ಲಿ ಚಿತ್ರಿಸಿದ್ದಾರೆ .ಮಹಿಳಾ ಆರೋಗ್ಯ, ಕುಟುಂಬ ವ್ಯವಸ್ಥೆ, ಸಮಾನತೆ, ಶಿಕ್ಷಣ ಮತ್ತು ಮಹಿಳಾ ಹಕ್ಕುಗಳ ಪ್ರಶ್ನೆಗಳನ್ನು ತಮ್ಮ ಕೃತಿಗಳಲ್ಲಿ ಪ್ರಸ್ತಾಪಿಸಿದ್ದಾರೆ

ವೈದೇಹಿ

ಸಮಕಾಲೀನ ಕನ್ನಡ ಸಾಹಿತ್ಯದ ಪ್ರಮುಖ ಮಹಿಳಾ ಧ್ವನಿ. ಕರಾವಳಿ ಕರ್ನಾಟಕದ ಸಂಸ್ಕೃತಿ, ಭಾಷಾ ಶೈಲಿ ಮತ್ತು ಮಹಿಳೆಯ ಜೀವನಾನುಭವಗಳನ್ನು ಅವರು ತಮ್ಮ ಕಥೆಗಳ ಮೂಲಕ ಪರಿಚಯಿಸಿದ್ದಾರೆ. ಇವರ ಸರಳ ಬರಹಗಳು ಆಳವಾದ ಪ್ರಭಾವ ಬೀರುತ್ತವೆ. ತಮ್ಮ ಕೃತಿಗಳಲ್ಲಿ ಗ್ರಾಮೀಣ ಮಹಿಳೆಯ ಬದುಕು,ನಿರೀಕ್ಷೆ ಮತ್ತು ಆತ್ಮಗೌರವವನ್ನು ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ.

ಗೀತಾ ನಾಗಭೂಷಣ

ದಲಿತ ಮಹಿಳೆಯರ ಬದುಕಿನ ಅನುಭವಗಳನ್ನು ಸಾಹಿತ್ಯದಲ್ಲಿ ದಾಖಲಿಸಿದವರು. ತಮ್ಮ ಕೃತಿಗಳ ಮೂಲಕ ಸಾಮಾಜಿಕ ಶೋಷಣೆಯ ವಿರುದ್ಧ ದ್ವನಿ ಎತ್ತಿದವರು. ನ್ಯಾಯ, ಸಮಾನತೆ ಮತ್ತು ಸಾಮಾಜಿಕ ಗೌರವವನ್ನು  ಸಾಹಿತ್ಯದ ಮೂಲಕ ಬೆಂಬಲಿಸಿದವರು. ಬಡತನ, ಶೋಷಣೆ ಮತ್ತು ದಲಿತ ಮಹಿಳೆಯರ ಬದುಕಿನ ಹೋರಾಟ ಇವರ ಕೃತಿಗಳ ಕೇಂದ್ರ ಅಂಶಗಳು.

ಪ್ರೇಮಾ ಭಟ್

ಪ್ರೇಮಾ ಭಟ್ ತಮ್ಮ ಭಾವನಾತ್ಮಕ ಬರವಣಿಗೆಯ ಮೂಲಕ ಗುರುತಿಸಿಕೊಂಡವರು. ಇವರ ಕೃತಿಗಳು ಮೃದುವಾದ ಭಾವನೆಗಳ ಹರಿವು. ತಮ್ಮ ಕಥೆಗಳ ಮೂಲಕ ಗಾಢ ವಿಚಾರಗಳನ್ನು ಅಭಿವ್ಯಕ್ತಪಡಿಸಿದ್ದಾರೆ. ಪ್ರೀತಿ, ತ್ಯಾಗ,ಸಂಬಂಧಗಳ ಸೂಕ್ಷ್ಮತೆಗಳ ಕುರಿತು ಮನ ಮುಟ್ಟುವಂತೆ ಅಕ್ಷರ ರೂಪಕ್ಕೆ ಇಳಿಸಿದ್ದಾರೆ.

ಬಾನು ಮುಷ್ತಾಕ್

ಕವಯತ್ರಿ, ಕಥೆಗಾರ್ತಿ ಮತ್ತು ಪ್ರಬಂಧಕಾರ್ತಿ ಬಾನು ಮುಷ್ತಾಕ್, ಮಹಿಳಾ ಅಸ್ತಿತ್ವ, ಧಾರ್ಮಿಕ,ಸಾಮಾಜಿಕ ವ್ಯವಸ್ಥೆಗಳು ಹಾಗೂ ಸಂಘರ್ಷಗಳನ್ನು ತಮ್ಮ ಬರಹಗಳಲ್ಲಿ ಪ್ರಶ್ನಿಸಿದ್ದಾರೆ. ಸಮಕಾಲೀನ ಮಹಿಳಾ ಸಾಹಿತ್ಯದಲ್ಲಿ ಪ್ರಭಾವಶಾಲಿ ಪಾತ್ರ ವಹಿಸುತ್ತಿದ್ದಾರೆ. ಇವರ ಸಾಹಿತ್ಯ ಕನ್ನಡದಲ್ಲಿ ಮಹಿಳಾ ಅನುಭವಕ್ಕೆ ವೇದಿಕೆ ನೀಡಿದೆ.

ಸುಧಾ ಮೂರ್ತಿ

 ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಹಾಗೂ ಶಿಕ್ಷಣತಜ್ಞೆ ಸುಧಾ ಮೂರ್ತಿ ತಮ್ಮ ಸರಳ ಶೈಲಿಯ ಬರಹಗಳಲ್ಲಿ  ಅಮೂಲ್ಯ ಜೀವನ ಪಾಠಗಳನ್ನು ಹೇಳುತ್ತಾರೆ . ಇವರ ಮೌಲ್ಯಾಧಾರಿತ ಮಕ್ಕಳ ಸಾಹಿತ್ಯ ಜನಪ್ರಿಯವಾಗಿದೆ. ತಮ್ಮ ಬರಹಗಳ ಮೂಲಕ ಓದುಗರಿಗೆ ಜೀವನದ ಸರಳತೆಯ ಸೌಂದರ್ಯವನ್ನು ಕಟ್ಟಿಕೊಟ್ಟಿದ್ದಾರೆ.

ಸಾಯಿಸುತೆ

ಸಾಯಿಸುತೆ ಕಾವ್ಯ ನಾಮದ ರತ್ನಾ, ಹೃದಯಸ್ಪರ್ಶಿ ಪ್ರೇಮಕಥೆಗಳ ಮೂಲಕ ಅಪಾರ ಜನಪ್ರಿಯತೆ ಪಡೆದವರು. ಇವರು ತಮ್ಮ ಕೃತಿಗಳ ಮೂಲಕ ಮಹಿಳೆಯ ಭಾವನೆಗಳನ್ನು, ಸಂಬಂಧಗಳನ್ನು ಮನಮುಟ್ಟುವ ರೀತಿಯಲ್ಲಿ ಚಿತ್ರಿಸಿದ್ದಾರೆ. ಇವರ ಅನೇಕ ಕಾದಂಬರಿಗಳು ಚಲನಚಿತ್ರಗಳಾಗಿ ತೆರೆಕಂಡಿವೆ.

ಪ್ರತಿಭಾ ನಂದಕುಮಾರ್

ಕವಯಿತ್ರಿ, ಲೇಖಕಿ, ಪತ್ರಕರ್ತೆ ಪ್ರತಿಭಾ ನಂದಕುಮಾರ್, ಹೆಣ್ಣಿನ ಆಸೆ, ಗೌರವ, ಸ್ವಾತಂತ್ರ್ಯದ ಕುರಿತು ಸಹಜವಾಗಿ ತಮ್ಮ ಬರಹದಲ್ಲಿ ವ್ಯಕ್ತಪಡಿಸುತ್ತಾರೆ. ಹೆಣ್ಣಿನ ಅಂತರಾಳ ಮತ್ತು ಸಂಘರ್ಷ ಇವರ ಬರವಣಿಗೆಯ ಪ್ರಮುಖ ವಿಷಯಗಳು. ಆಧುನಿಕತೆಯ ಬದುಕು,ಉದ್ಯೋಗ ಅನುಭವ, ಸಂಬಂಧಗಳ ಕುರಿತು ಅನೇಕ ಕಾವ್ಯ ಹಾಗೂ ಪ್ರಬಂಧಗಳಲ್ಲಿ ಉಲ್ಲೇಖಿಸಿದ್ದಾರೆ.

ಡಾ. ಎಂ. ಎಸ್.ಆಶಾ ದೇವಿ

ಆಶಾ ದೇವಿಯವರ ಸಾಹಿತ್ಯ ಸಮಕಾಲೀನ ಕನ್ನಡ ಸಾಹಿತ್ಯದಲ್ಲಿ ಮಹಿಳೆಯರ ಅಂತರಂಗವನ್ನು ಆಳವಾಗಿ ಸ್ಪರ್ಶಿಸುತ್ತವೆ.ತಮ್ಮ ಕಥೆಗಳ ಮೂಲಕ ಕೌಟುಂಬಿಕ ಸಂಬಂಧಗಳನ್ನು  ಹಾಗೂ ಸಾಮಾಜಿಕ ಸವಾಲುಗಳನ್ನು ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ.ಇವರ ಕೃತಿಗಳು ಮಹಿಳೆಯ ಬದುಕಿನ ದಿನನಿತ್ಯದ ಹೋರಾಟವನ್ನು ಬಿಂಬಿಸುತ್ತವೆ.

ಡಾ. ವಸುಂದರಾ ಭೂಪತಿ

ಡಾ. ವಸುಂಧರಾ ಭೂಪತಿಯವರು ವೈದ್ಯೆ ಮತ್ತು ಬರಹಗಾರ್ತಿಯಾಗಿ ಸಾರ್ವಜನಿಕರಿಗೆ ಉಪಯುಕ್ತವಾಗುವ ವೈದ್ಯಕೀಯ ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆಯುವುದರಲ್ಲಿ ಪ್ರಸಿದ್ಧರು. ಹಲವು ಮಾಸ ಪತ್ರಿಕೆಗಳ ಸಂಪಾದಕ ಮಂಡಳಿಯ ಸದಸ್ಯರಾಗಿ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದಾರೆ.

ಡಾ. ಎಚ್.ಎಸ್. ಪ್ರೇಮಾ

ಖ್ಯಾತ ಪೌಷ್ಟಿಕಾಂಶ ತಜ್ಞೆ, ಸಂಶೋಧಕಿ ಮತ್ತು ಲೇಖಕಿಯಾದ ಡಾ. ಎಚ್.ಎಸ್. ಪ್ರೇಮಾ ಆಹಾರ ಮತ್ತು ಆರೋಗ್ಯದ ಕುರಿತು ಪುಸ್ತಕಗಳನ್ನು ಬರೆದಿದ್ದಾರೆ.  ಆಹಾರ ಪದ್ಧತಿಯ ಮಹತ್ವವನ್ನು ಸಾಹಿತ್ಯದ ಮೂಲಕ ಸಾರುವ ಪ್ರಯತ್ನ ಇವರದ್ದು.ಆಹಾರ ಪದ್ಧತಿ ಮತ್ತು ಆರೋಗ್ಯದ ಕುರಿತು  ವಿವಿಧ ಕನ್ನಡ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಾರೆ.

ಡಾ. ಕೆ. ಎಸ್. ಪವಿತ್ರ

ಡಾ. ಕೆ. ಎಸ್. ಪವಿತ್ರ ನಾಡಿನ  ಪ್ರಸಿದ್ಧ ಮನೋವೈದ್ಯೆ ಹಾಗೂ ಲೇಖಕಿ.ಮಹಿಳೆಯರ ಮನಸ್ಥಿತಿ ಮತ್ತು ಸವಾಲುಗಳ ಕುರಿತಾದ ಪುಸ್ತಕಗಳು ಹಾಗೂ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಲೇಖನಗಳ ಸಂಗ್ರಹವನ್ನು ಹೊಂದಿದ್ದಾರೆ. ವೈದ್ಯಕೀಯ ಮಾಹಿತಿಯನ್ನು ಜನಸಾಮಾನ್ಯರಿಗೆ ಸರಳವಾಗಿ ತಲುಪಿಸುವ ಪ್ರಯತ್ನ ಇವರದ್ದು.

ರಂಜನಿ ರಾಘವನ್

ಯುವ ಓದುಗರಿಗೆ ಆಧುನಿಕ ಹಾಗೂ ಸರಳ ಶೈಲಿಯಲ್ಲಿ ಕಥೆ ಹೇಳುವ ಮೂಲಕ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ವೇದಿಕೆಗಳಲ್ಲಿ ಕನ್ನಡ ಸಾಹಿತ್ಯವನ್ನು ಹೊಸ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಇವರದ್ದು. ದಿನ ನಿತ್ಯ ಸಾಮಾನ್ಯವಾಗಿ ನಡೆಯುವ ಘಟನೆ ಹಾಗೂ ಅನುಭವಗಳ ಬಗ್ಗೆ ಸ್ವಾರಸ್ಯಕರವಾಗಿ ಬರೆಯುವ ಇವರ ಶೈಲಿಯನ್ನು ಯುವ ಪೇಳಿಗೆ ಮೆಚ್ಚಿಕೊಂಡಿದೆ

ಕನ್ನಡ ಸಾಹಿತ್ಯದಲ್ಲಿ ಮಹಿಳಾ ಲೇಖಕಿಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ತಮ್ಮ ಕೃತಿಗಳ ಮೂಲಕ ಮಹಿಳೆಯರ ಅನುಭವಗಳು, ಭಾವನೆಗಳು ಮತ್ತು ಸಾಮಾಜಿಕ ಸವಾಲುಗಳನ್ನು ಅಕ್ಷರಗಳಲ್ಲಿ ಮೂಡಿಸಿ ಕನ್ನಡ ಸಾಹಿತ್ಯವನ್ನು ಇನ್ನಷ್ಟು ಸಮೃದ್ಧಗೊಳಿಸಿದ್ದಾರೆ.

ಕನ್ನಡ ಸಾಹಿತ್ಯದಲ್ಲಿ ಮಹಿಳಾ ಧ್ವನಿಯ ಮಹತ್ವವನ್ನು ಅರಿತು ವಸಂತ ಪ್ರಕಾಶನ ಅನೇಕ ಮಹಿಳಾ ಲೇಖಕಿಯರ ಕೃತಿಗಳನ್ನು ಪ್ರಕಟಿಸಿದೆ. ಪ್ರಸಿದ್ಧ ಲೇಖಕಿಯರು ಸೇರಿದಂತೆ ಹೊಸ ಧ್ವನಿಗಳಿಗೂ ಸಾಹಿತ್ಯ ಲೋಕದಲ್ಲಿ ಪ್ರೋತ್ಸಾಹ ನೀಡುತ್ತಾ ಬಂದಿದೆ. ಮಹಿಳಾ ಸಾಹಿತಿಗಳ ಉನ್ನತ ಗುಣಮಟ್ಟದ ಕೃತಿಗಳು ವಸಂತ ಪ್ರಕಾಶನದಲ್ಲಿ ಲಭ್ಯವಿದೆ.

Share :